Wednesday, August 10, 2022

Latest Posts

ಮುಂದಿನ ಅವಧಿಗೂ ಸಿಎಂ ಹುದ್ದೆಯಲ್ಲಿ ಯಡಿಯೂರಪ್ಪ ಅವರೇ: ಆರ್.ಅಶೋಕ್

ಹೊಸ ದಿಗಂತ ವರದಿ, ಚಿತ್ರದುರ್ಗ:

ಮುಖ್ಯಮಂತ್ರಿ ಹುದ್ದೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರೇ ಮುಂದುವರಿಯುವಂತೆ ಶಾಸಕರ ಸಭೆಯಲ್ಲಿ ಅಭಿಪ್ರಾಯ
ವ್ಯಕ್ತವಾಗಿದೆ. ಹಾಗಾಗಿ ಮುಂದಿನ ಅವಧಿಗೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಕಂದಾಯ
ಸಚಿವ ಆರ್.ಅಶೋಕ್ ತಿಳಿಸಿದರು.
ಜಿಲ್ಲೆಯಲ್ಲಿ ಬಿದ್ದ ಅಕಾಲಿಕ ಮಳೆಯಿಂದ ಉಂಟಾಗಿರುವ ಬೆಳೆ ಹಾನಿಯ ವೀಕ್ಷಣೆಗೆ ಸೋಮವಾರ ಹಿರಿಯೂರು ಹಾಗೂ
ಚಿತ್ರದುರ್ಗ ತಾಲ್ಲೂಕಿನ ವಿವಿಧ ಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆಗೆ ಸಿದ್ಧತೆಗಳು ನಡೆಯುತ್ತಿವೆ. ಪಕ್ಷದ ಹಿರಿಯ ಶಾಸಕರಿಗೂ ಆದ್ಯತೆ ನೀಡಲಾಗುತ್ತದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ನೆರವಾಗಿರುವವರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಒತ್ತು ನೀಡಲಾಗುವುದು. ನೂತನ ಸಚಿವರ ಪಟ್ಟಿ ಮಂಗಳವಾರ ಹೊರಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಆರ್ಥಿಕ ಸಂಕಷ್ಟದಲ್ಲೂ ರಾಜ್ಯ ಸರ್ಕಾರ ಕೋವಿಡ್ ಪಿಡುಗನ್ನು ಸಮರ್ಥವಾಗಿ ನಿರ್ವಹಿಸಿದೆ. ಆದರೆ ಕಾಂಗ್ರೆಸ್ ನಾಯಕರು ಹೊಟ್ಟೆಕಿಚ್ಚಿನಿಂದ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಪ್ರಕೃತಿ ವಿಕೋಪ ಸೇರಿದಂತೆ ಯಾವುದೇ ಅನಾಹುತ ಸಂಭವಿಸಲಿಲ್ಲ. ಹಾಗಾಗಿ ಅವರು ಸುಖದಲ್ಲೇ ಕಾಲ ಕಳೆದರು ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಭವಿಷ್ಯ ನುಡಿಯಲು ಆರಂಭಿಸಿದ್ದಾರೆ. ಆರ್‌ಎಸ್‌ಎಸ್ ಕುರಿತು ಅವರು ಆಡಿರುವ ಮಾತುಗಳು ಖಂಡನೀಯ. ಆರ್‌ಎಸ್‌ಎಸ್‌ನವರು ಸಗಣಿ, ಗಂಜಲ ಎತ್ತಿಲ್ಲ ಎಂದು ಹೇಳಿದ್ದಾರೆ. ಇವರು ಯಾವಾಗ ಅದನ್ನೆಲ್ಲಾ ನೋಡಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss