Sunday, August 14, 2022

Latest Posts

ಮುಂದಿನ ಏಪ್ರಿಲ್ ಬಳಿಕ ದೇಶದ ಅರ್ಥ ವ್ಯವಸ್ಥೆ ಸುಧಾರಣೆ: ಆರ್’ಬಿಐ ನಿರ್ದೇಶಕ ಸತೀಶ್ ಕಾಶೀನಾಥ ಮರಾಠೆ

ಹೊಸದಿಗಂತ ವರದಿ,ಮಂಗಳೂರು:

ಮುಂದಿನ ಏಪ್ರಿಲ್ ಬಳಿಕ ದೇಶದ ಅರ್ಥವ್ಯವಸ್ಥೆ ಸುಧಾರಣೆ ಕಾಣಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ ಸತೀಶ್ ಕಾಶೀನಾಥ ಮರಾಠೆ ಹೇಳಿದರು.

ಸಹಕಾರ ಭಾರತಿ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ವಿಶ್ವಕರ್ಮ ಬ್ಯಾಂಕ್‌ನಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಸೋಮವಾರ ಆಗಮಿಸಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕೊರೊನಾದಿಂದಾಗಿ ಪ್ರಸ್ತುತ ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಬ್ಯಾಂಕಿಂಗ್ ವ್ಯವಹಾರ ಹಿನ್ನಡೆ ಅನುಭವಿಸಿತು. ಕೋವಿಡ್ ಲಾಕ್‌ಡೌನ್ ತೆರವು ಬಳಿಕ ದೇಶದ ಆರ್ಥಿಕತೆ ನಿಧಾನಕ್ಕೆ ಚೇತರಿಕೆ ಕಾಣುತ್ತಿದೆ. ಜಿಎಸ್‌ಟಿ ಸಂಗ್ರಹವೂ ಹೆಚ್ಚಳಗೊಂಡಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ದೇಶದ ಅರ್ಥವ್ಯವಸ್ಥೆ ಸಹಜ ಸ್ಥಿತಿಗೆ ಮರಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಲಾಕ್‌ಡೌನ್‌ನ ದುಷ್ಪರಿಣಾಮದ ಸಂದರ್ಭವಿದ್ದರೂ ದೇಶದ ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಉತ್ತಮ ನಿರ್ವಹಣೆ ತೋರಿದ್ದು, ಸುಭದ್ರ ಸ್ಥಿತಿಯಲ್ಲಿವೆ. ಶೇ.74.5 ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಎ, ಎ ಪ್ಲಸ್, ಬಿ ರೇಟಿಂಗ್ ಹೊಂದಿವೆ. ಪಟ್ಟಣ ಸಹಕಾರ ಬ್ಯಾಂಕ್‌ಗಳ ಒಟ್ಟು ಎನ್‌ಪಿಎ ಶೇ.10.8 ಹಾಗೂ ನಿವ್ವಳ ಎನ್‌ಪಿಎ ಶೇ.5.1 ಆಗಿದೆ. ಇದು ಆರ್‌ಬಿಐ ಮಾನದಂಡಕ್ಕಿಂತ ಕಡಿಮೆ ಇದೆ. ಆರ್‌ಬಿಐ ನಿವ್ವಳ ಮಾನದಂಡ ಶೇ .6 ಆಗಿರುತ್ತದೆ ಎಂದರು.

ತಂತ್ರಜ್ಞಾನ ಅಳವಡಿಕೆಯಲ್ಲೂ ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಹಿಂದೆ ಬಿದ್ದಿಲ್ಲ. ನೆಫ್ಟ್, ಆರ್‌ಟಿಜಿಎಸ್, ಸೇರಿದಂತೆ ಅತ್ಯಾಧುನಿಕ ಬ್ಯಾಂಕಿಂಗ್ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿವೆ. ಸಹಕಾರಿ ಕ್ಷೇತ್ರ ಇಂದು ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳಿಗೆ ಪರ್ಯಾಯ ಶಕ್ತಿಯಾಗಿ ಮೂಡಿಬಂದಿದ್ದು ಸುಸ್ಥಿರ ಮತ್ತು ಸಮಾನ ಅಭಿವೃದ್ಧಿಯ ಧ್ಯೇಯದೊಂದಿಗೆ ಮುನ್ನಡೆಯುತ್ತಿದೆ ಎಂದರು.

ಸಹಕಾರ ಭಾರತಿ ಸ್ಥಾಪನೆಗೊಂಡು 40 ವರ್ಷವಾಯಿತು. ಇಂದು ಮೇಘಾಲಯ, ಅರುಣಾಚಲ ಪ್ರದೇಶ ಹೊರತುಪಡಿಸಿ ದೇಶದ ೪೫೦ ಜಿಲ್ಲೆಗಳಲ್ಲಿ ಸಹಕಾರ ಭಾರತಿ ಸದಸ್ಯರಿದ್ದಾರೆ. 20,000 ಕ್ಕೂ ಅಧಿಕ ಸಹಕಾರಿ ಸಂಘಗಳು ಸಹಕಾರ ಭಾರತಿ ತಂಡದಲ್ಲಿವೆ ಎಂದು ಸತೀಶ್ ಕಾಶೀನಾಥ ಮರಾಠೆ ಹೇಳಿದರು.

ಸಹಕಾರ ಭಾರತಿ ರಾಜ್ಯಾಧ್ಯಕ್ಷ ಎಸ್.ಆರ್.ಸತೀಶ್ಚಂದ್ರ, ರಾಜ್ಯ ಕಾರ್ಯದರ್ಶಿ ಹರೀಶ್ ಆಚಾರ್, ರಾಷ್ಟ್ರೀಯ ಕಾರ್‍ಯಕಾರಿಣಿ ಸಮಿತಿ ಸದಸ್ಯ ಕೆ. ರವಿರಾಜ ಹೆಗ್ಡೆ, ಮಂಗಳೂರು ಮಹಾನಗರ ಜಿಲ್ಲಾಧ್ಯಕ್ಷ ಚಿತ್ತರಂಜನ್ ಬೋಳಾರ, ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಣೈ ಮರೋಳಿ, ಉಡುಪಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss