ಹೊಸದಿಗಂತ ವರದಿ, ಮಂಡ್ಯ:
ಪ್ಯಾರಿಸ್ ನಡೆಯುವ ಮುಂದಿನ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಹೆಚ್ಚು ಮಂದಿ ಪದಕಗಳನ್ನು ಗೆಲ್ಲಲು ಅನುಕೂಲವಾಗುವ ನಿಟ್ಟಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸನ್ನದ್ದವಾಗಿದೆ ಎಂದು ಇಲಾಖಾ ಸಚಿವ ಕೆ.ಸಿ. ನಾರಾಯಣಗೌಡ ತಿಳಿಸಿದರು.
75ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಮೃತ ಕ್ರೀಡಾ ದತ್ತು ಯೋಜನೆಗೆ ಚಾಲನೆ ನೀಡಿ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡುವಂತೆ ಸೂಚನೆ ನೀಡಿದ್ದರು. ಅದರನ್ವಯ ಉನ್ನತಾಧಿಕಾರಿ ಸಮಿತಿಯಲ್ಲಿ ವಿಸೃತವಾಗಿ ಚರ್ಚಿಸಿ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದ ಪ್ರತಿಭಾನ್ವಿತ 75 ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಟೋಕಿಯೋ ಒಲಂಪಿಕ್ಸ್ನಲ್ಲಿ ಭಾಗವಹಿಸಿದ್ದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್, ಈಜುಪಟು ಶ್ರೀಹರಿ ನಟರಾಜ್, ಪ್ಯಾರಾ ಈಜುಪಟು ನಿರಂಜನ್, ೌದಾಮಿರ್ಜಾ, ಷಕೀನಾ ಖಾತೂನ್ ಸೇರಿದಂತೆ ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ 75 ಕ್ರೀಡಾಪಟುಗಳನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಮೃತ ಕ್ರೀಡಾದತ್ತು ಯೋಜನೆಯಲ್ಲಿ ವಾರ್ಷಿಕ ಐದು ಲಕ್ಷ ರೂಪಾಯಿ ನೀಡಲಾಗುತ್ತದೆ. ಅಗತ್ಯ ತರಬೇತಿ ಹಾಗೂ ಪ್ರೋತ್ಸಾಹ ನೀಡುವ ಮೂಲಕ ಮುಂದಿನ ಒಲಂಪಿಕ್ಸ್ನಲ್ಲಿ ಹೆಚ್ಚಿನ ಪದಕಗಳನ್ನು ಗೆಲ್ಲುವ ನಿಟ್ಟಿನಲ್ಲಿ ಕ್ರೀಡಾಪಟುಗಳನ್ನ ಸಜ್ಜುಗೊಳಿಸಲಾಗುತ್ತದೆ. ಇದರ ಜೊತೆಗೆ ಕ್ರೀಡಾಪಟುಗಳಿಗೆ ಮತ್ತಷ್ಟು ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಸಿಎಸ್ಆರ್ ಅಡಿಯಲ್ಲಿ ದತ್ತು ತೆಗೆದುಕೊಳ್ಳಲು 150ಕ್ಕೂ ಹೆಚ್ಚು ಕಂಪನಿಗಳಿಗೆ ಪತ್ರ ಬರೆದು ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ 50 ಕ್ಕೂ ಹೆಚ್ಚು ಕಂಪನಿಗಳು ಮುಂದೆ ಬಂದಿವೆ. ನವೆಂಬರ್ ಮೊದಲನೇ ವಾರದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಕ್ರೀಡಾದತ್ತು ಯೋಜನೆಯಲ್ಲಿ ಆಯ್ಕೆ ಆಗಿರುವ ಎಲ್ಲಾ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ವಿತರಿಸಲಿದ್ದಾರೆ ಎಂದು ಸಚಿವ ನಾರಾಯಣಗೌಡ ತಿಳಿಸಿದ್ದಾರೆ.
ಗಾಲ್ಫ್ – 1, ಸ್ವಿಮ್ಮಿಂಗ್ -5, ಅಥ್ಲೆಟಿಕ್ಸೃ್- 12, ಪ್ಯಾರಾ ಅಥ್ಲೆಟಿಕ್ಸೃ್- 3, ಸೈಕ್ಲಿಂಗ್- 8, ಬ್ಯಾಸ್ಕೆಟ್ಬಾಲ್- 7, ಕುಸ್ತಿ- 4, ಟೆನ್ನಿಸ್-3, ಟೇಬಲ್ ಟೆನ್ನಿಸ್-2, ಹಾಕಿ- 5, ಬ್ಯಾಡ್ಮಿಂಟನ್- 9 ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸುವ 75 ಪ್ರತಿಭಾವಂತ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.