ಹೊಸ ದಿಗಂತ ವರದಿ, ಹುಬ್ಬಳ್ಳಿ:
ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ಬಜೆಟ್ನಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ 20 ಮನೆ ನೀಡಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ಗೋಕುಲ್ ಗಾರ್ಡನ್ನಲ್ಲಿ ಬಿಜೆಪಿ ಧಾರವಾಡ ಗ್ರಾಮಾಂತರ ಜಿಲ್ಲಾ ಘಟಕದಿಂದ ಭಾನುವಾರ ಆಯೋಜಿಸಿದ್ದ ಗ್ರಾಮ ಪಂಚಾಯತಿ ನೂತನ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮನೆ ಹಂಚಿಕೆ ನಡೆಯುವ ರೀತಿಯನ್ನು ಗಮನಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ 20 ಮನೆ ನೀಡಲಾಗುವುದು. ಗ್ರಾಮ ಪಂಚಾಯತಿ ನೂತನ ಸದಸ್ಯರು ಅರ್ಹರಿಗೆ ಮನೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಐದು ವರ್ಷದಲ್ಲಿ ನೂರು ಮನೆಗಳು ಸಿಕ್ಕರೆ ಸೂರಿನ ಕೊರತೆ ಮುಗಿಯಲಿದೆ. 3550 ಎಕರೆ ಜಮೀನು ಖರೀದಿ ಮಾಡಲಾಗಿದ್ದು, 96 ಸಾವಿರ ಬಡವರಿಗೆ ಜಾಗ ಹಂಚಿಕೆ ಮಾಡಲಾಗುತ್ತಿದೆ. 8560 ಎಕರೆ ಜಾಗದಲ್ಲಿ ಮನೆಕಟ್ಟಿಕೊಂಡಿದ್ದ ಬಡವರಿಗೆ ಆಸ್ತಿ ಹಕ್ಕನ್ನು ನೀಡುವ ಐತಿಹಾಸಿಕ ತೀರ್ಮಾನ ರಾಜ್ಯ ಸರ್ಕಾರ ಮಾಡಿದೆ ಎಂದರು.
ಗ್ರಾಮ ಪಂಚಾಯತಿಗೆ 1 ಕೋಟಿ ರೂ. ಅನುದಾನ ನೀಡುವ ಸಂಪ್ರದಾಯವನ್ನು ಪ್ರಧಾನಿ ಮೋದಿ ಅವರು ಹುಟ್ಟು ಹಾಕಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ಗ್ರಾಮ ಪಂಚಾಯತಿ ಸದಸ್ಯರು ಸಮರ್ಪಕವಾಗಿ ಬಳಸಿಕೊಂಡರೆ ರಾಜ್ಯ ಸರ್ಕಾರ ಅನುದಾನದ ಅವಶ್ಯಕತೆ ಬೀಳುವುದಿಲ್ಲ ಎಂದರು.
ನೂತನ ಗ್ರಾಪಂ ಸದಸ್ಯರು ಪಿಡಿಓಗಳನ್ನು ಎಷ್ಟರ ಮಟ್ಟಿಗೆ ಕಂಟ್ರೋಲ್ಗೆ ತರುತ್ತಿರೋ, ಅಷ್ಟರಮಟ್ಟಿಗೆ ಪಂಚಾಯತಿಗಳು ಒಳ್ಳೆಯ ಇತಿಹಾಸ ಸೃಷ್ಟಿ ಮಾಡುತ್ತವೆ. ಹೆಬ್ಬೆಟ್ಟು ಹಾಕುವ ಪ್ರವೃತ್ತಿ ಬಿಟ್ಟು ಗ್ರಾಪಂ ಅಭಿವೃದ್ಧಿಗಾಗಿ ಬಂದಿರುವ ಹಣವನ್ನು, ಗ್ರಾಮದ ಅಭಿವೃದ್ಧಿಗಾಗಿ ಬಳಕೆಗಾಗಿ ಪಿಡಿಒ ಕೊರಳಪಟ್ಟಿ ಹಿಡಿದಿದ್ದೇ ಆದರೆ, ಪಟ್ಟಣಕ್ಕಿಂತ ಹೆಚ್ಚು ಹಳ್ಳಿಗಳು ಅಭಿವೃದ್ಧಿಯಾಗುತ್ತವೆ ಎಂದರು.