ಚಿಕ್ಕಬಳ್ಳಾಪುರ/ಬೆಂಗಳೂರು: ಮೇ.17ರ ವರೆಗಿನ ಮುಂದಿನ ಲಾಕ್ ಡೌನ್ ಗೆ ಸಂಬಂಧಿಸಿದಂತೆ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದ್ದು, ಬೆಂಗಳೂರಿಗೆ ಸೇರಿದಂತೆ 5 ಜಿಲ್ಲೆಗಳನ್ನು ಒಂದೇ ಘಟಕವಾಗಿ ಪರಿಗಣಿಸಲಾಗಿದೆ.
ಅನುಮತಿಸಿದ ಚಟುವಟಿಕೆಗಳಿಗೆ ಅವಕಾಶ
ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಚಿಕ್ಕಬಳ್ಳಾಪುರ, ರಾಮನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ರ ವರೆಗೆ ಚಲನವಲನದ ಉದ್ದೇಶದಿಂದ ಒಂದೇ ಘಟಕವಾಗಿ ಪರಿಗಣಿಸಲಾಗಿದ್ದು, ಅನುಮತಿಸಿದ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.
ಈ ಜಿಲ್ಲೆಗಳಲ್ಲಿ ಚಲನವಲನಗಳಿಗೆ ಕೆಲಸ ಮಾಡುತ್ತಿರುವ ಕಂಪನಿ, ಸಂಸ್ಥೆಯಿಂದ ನೀಡಲಾದ ಪತ್ರ ಮತ್ತು ಗುರುತಿನ ಚೀಟಿಯೊಂದಿಗೆ ಮಾತ್ರ ಚಲನವಲನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಂತರ್ ಜಿಲ್ಲಾ ಸಂಚಾರಕ್ಕೆ ಪಾಸ್ ಕಡ್ಡಾಯ
ಅನುಮತಿಸದ ಚಟುವಟಿಕೆಗಳಿಗೆ ಅಂತರ್ ಜಿಲ್ಲಾ ಸಂಚಾರಕ್ಕೆ ಪಾಸ್ ಕಡ್ಡಾಯವಾಗಿದ್ದು ಆಯಾಯ ಜಿಲ್ಲಾಧಿಕಾರಿಗಳು ಅಥವಾ ಆಯುಕ್ತಾಲಯದ ಪೊಲೀಸ್ ಉಪ ಆಯುಕ್ತರ ಕಡೆಯಿಂದ ಅನುಮತಿ ಹಾಗೂ ಪಾಸ್ ಪಡೆಯಬೇಕಿದೆ. ಇನ್ನೂ ಸಂಜೆ 7 ರಿಂದ ಬೆಳಗ್ಗೆ 7 ರ ವರಗೆ ರಾತ್ರಿಯ ಕರ್ಫೂ ಅವಧಿಯಲ್ಲಿ ಕೆಲಸ ನಿರ್ವಹಿಸಲು ಕೈಗಾರಿಕೆಗಳು, ವಾಣಿಜ್ಯ, ಐಟಿ,ಬಿಟಿ ಇತ್ಯಾಧಿಗಳು ಸಂಬಂಧಪಟ್ಟ ಇಲಾಖಾ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಆಯುಕ್ತಾಲಯದ ಪೊಲೀಸ್ ಉಪ ಆಯುಕ್ತರಿಗೆ ಪಾಸ್ ನೀಡುವಂತೆ ಶಿಫಾರಸ್ಸು ಮಾಡಬೇಕೆಂದು ಮುಖ್ಯಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಣಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಟಿ.ಎಂ.ವಿಜಯ ಭಾಸ್ಕರ್ ಆದೇಶದಲ್ಲಿ ತಿಳಿಸಿದ್ದಾರೆ.