ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ಬಗ್ಗೆ ಹೇಳಿಕೆ ವಿಚಾರವಾಗಿ ಭವಿಷ್ಯದ ನಾಯಕತ್ವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬಾರದು. ಪಕ್ಷದಲ್ಲಿ ಒಗ್ಗಟ್ಟು ದೃಷ್ಟಿಯಿಂದ ಹೇಳಿಕೆ ನೀಡದಂತೆ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯಿಂದ ಮಾಧ್ಯಮ ಪ್ರಕಟಣೆ ಬಿಡುಗಡೆ ಆಗಿದೆ.
ಕಳೆದ ಒಂದು ತಿಂಗಳಿಂದೀಚೆಗೆ ಪಕ್ಷದಲ್ಲಿ ನಡೆದಿರುವ ಬೆಳವಣಿಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ, ತಮ್ಮ ನಾಯಕರು ಮತ್ತು ಕಾರ್ಯಕರ್ತರಿಗೆ ಖಡಕ್ ವಾರ್ನಿಂಗ್ ಕೊಟ್ಟಿದೆ.
ಮುಂದಿನ ಸಿಎಂ ಬಗ್ಗೆ ಪಕ್ಷದ ಶಾಸಕರಿಂದ ಹೇಳಿಕೆಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಇದನ್ನ ಗಂಭೀರವಾಗಿ ಪರಿಗಣಿಸಿದ್ದ ಶಿಸ್ತು ಪಾಲನಾ ಸಮಿತಿ ನ.5ರಂದು ಸಭೆ ನಡೆಸಿತ್ತು. ಸಭೆಯಲ್ಲಿ ಕೈಗೊಂಡ ತೀರ್ಮಾನದ ಬಗ್ಗೆ ಇದೀಗ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಶಾಸಕ ಜಮೀರ್ ಅಹ್ಮದ್ ಮೊದಲು ವಿಚಾರವೆತ್ತಿದರು. ಬಳಿಕ ಡಿ.ಕೆ.ಶಿವಕುಮಾರ್ ಕಡೆಯಿಂದಲೂ ಕೆಲವು ಶಾಸಕರು ಡಿಕೆಶಿ ಮುಂದಿನ ಸಿಎಂ ಎಂದರು. ಈ ವಿಷಯ ಹೈಕಮಾಂಡ್ ವರೆಗೂ ತಲುಪಿತು. ಉಪ ಚುನಾವಣೆ ನಡೆಯುತ್ತಿರುವಾಗ ಈ ಬೆಳವಣಿಗೆ ಒಳ್ಳೆಯದಲ್ಲ ಎಂಬ ಸಂದೇಶ ಪಕ್ಷದ ದೆಹಲಿ ನಾಯಕರಿಂದ ಬರುತ್ತಿದ್ದಂತೆ ಶಿಸ್ತುಪಾಲನಾ ಸಮಿತಿ ಸಭೆ ನಡೆಸಿದ್ದು, ಭವಿಷ್ಯದ ಶಾಸಕಾಂಗ ಪಕ್ಷದ ನಾಯಕತ್ವದ ಬಗ್ಗೆ ನಾಯಕರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರುವುದರ ಬಗ್ಗೆ ವಿಸ್ತೃತ ಚರ್ಚೆ ನಡೆಸಿದೆ.
ಕಾಂಗ್ರೆಸ್ ನಾಯಕತ್ವ ಕುರಿತು ಪಕ್ಷದಲ್ಲಿ ಮುಖಂಡರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನು ಶಿಸ್ತು ಪಾಲನಾ ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಸೂಕ್ತ ಸಮಯದಲ್ಲಿ ಸಮಿತಿಯು ಚರ್ಚೆ ನಡೆಸಲಿದೆ. ಪಕ್ಷದ ಒಗ್ಗಟ್ಟಿನ ದೃಷ್ಟಿಯಿಂದ ಮುಂದೆ ಹೇಳಿಕೆ ನೀಡಬಾರದು. ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಸಮಿತಿ ಅಭಿಪ್ರಾಯ ಎಂದು ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯ ಅಧ್ಯಕ್ಷ ರೆಹಮಾನ್ ಖಾನ್ ಹಾಗೂ ಸಮಿತಿ ಸಂಚಾಲಕ ನಿವೇದಿತ್ ಆಳ್ವಾರಿಂದ ಸಂದೇಶ ಕಳಿಸಿದ್ದಾರೆ.