Tuesday, August 16, 2022

Latest Posts

ಮುಂದಿನ 3-5ವರ್ಷದೊಳಗೆ ಭಾರತ ಬಲಾಢ್ಯ ಆರ್ಥಿಕ ಶಕ್ತಿಯಾಗಲಿದೆ: ಸತೀಶ್ ಕಾಶಿನಾಥ್ ಮರಾಠೆ

ಹೊಸದಿಗಂತ ವರದಿ,ಮಂಗಳೂರು:

ಆತ್ಮ ನಿರ್ಭರ ಯೋಜನೆಯಿಂದ ಸಹಕಾರ ಸಂಸ್ಥೆಗಳ ಮೂಲಕ ಕೃಷಿ, ಗ್ರಾಮೀಣ ವಲಯ, ಉತ್ಪಾದನಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಮುಂದಿನ 3ರಿಂದ 5ವರ್ಷದೊಳಗೆ ಭಾರತ ಬಲಾಢ್ಯ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಲಿದೆ ಎಂದು ಸಹಕಾರ ಭಾರತಿ ಮಾರ್ಗದರ್ಶಕ, ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶಕ ಸತೀಶ್ ಕಾಶಿನಾಥ್ ಮರಾಠೆ ಹೇಳಿದರು.

ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆ ವತಿಯಿಂದ ಸಹಕಾರ ಭಾರತಿ ಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ರಥಬೀದಿಯ ವಿಶ್ವಕರ್ಮ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ‘ಸಹಕಾರದ ಮೂಲಕ ಆತ್ಮನಿರ್ಭರ ಭಾರತ’ ಎಂಬ ವಿಷಯದ ಬಗ್ಗೆ ಅವರು ಉಪನ್ಯಾಸ ನೀಡಿದರು.

ವಿದೇಶಗಳಲ್ಲಿ ನೀರು, ವಿದ್ಯುತ್ ಪೂರೈಕೆ, ಆರೋಗ್ಯ ಮುಂತಾದ ಸೇವಾ ವಲಯಗಳನ್ನು ಸಹಕಾರಿ ಸಂಸ್ಥೆಗಳು ನಿರ್ವಹಿಸುತ್ತಿವೆ. ಸಹಕಾರದಲ್ಲಿ ಸೇವೆಯ ಉದ್ದೇವಿದೆಯೇ ಹೊರತು ಲಾಭದ ದೃಷ್ಟಿಕೋನವಿಲ್ಲ. ನಮ್ಮಲ್ಲೂ ಈ ರೀತಿ ಆಗಬೇಕು. ಸಹಕಾರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎಲ್ಲ ರಾಜ್ಯ ಸರಕಾರಗಳು ವಿಷನ್ ಡಾಕ್ಯುಮೆಂಟ್ ರೂಪಿಸಬೇಕು ಎಂದು ಅವರು ಆಗ್ರಹಿಸಿದರು.

ದೇಶದಲ್ಲಿ ಆಹಾರ ಉತ್ಪಾದನೆ ಅಗತ್ಯಕ್ಕಿಂತ ಹೆಚ್ಚೇ ಇದೆ. ಆದರೆ ಸಂಸ್ಕರಣೆ ಮಾಡದ ಕಾರಣ ನಷ್ಟವಾಗಿ ಹೋಗುತ್ತಿದೆ. ವಿದೇಶದಲ್ಲಿ ಶೇ.80ರಷ್ಟು ಆಹಾರ ಉತ್ಪನ್ನಗಳು ಸಂಸ್ಕರಣೆಗೊಂಡರೆ, ನಮ್ಮಲ್ಲಿ ಈ ಪ್ರಮಾಣ ಶೇ. 20 ಮಾತ್ರ. ಹಣ್ಣು, ತರಕಾರಿ, ಎಣ್ಣೆಬೀಜಗಳ ಸಂಸ್ಕರಣೆ ಮೂಲಕ ಕೃಷಿ ಕ್ಷೇತ್ರದ ಆದಾಯವನ್ನು ದ್ವಿಗುಣಗೊಳಿಸಬಹುದು. ಆತ್ಮನಿರ್ಭರ ಭಾರತ ಯೋಜನೆ ಮೂಲಕ ದೇಶದಲ್ಲಿ ಆಹಾರ ಉತ್ಪನ್ನಗಳ ಸಂಸ್ಕರಣೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ನೋಟು ಅಪಮೌಲ್ಯ, ಜಿಎಸ್‌ಟಿ, ರೇರಾ ಕಾಯ್ದೆ ಜಾರಿಯಿಂದ ತಕ್ಷಣಕ್ಕೆ ಉತ್ತಮ ಪರಿಣಾಮ ದೊರೆಯದಿದ್ದರೂ, ದೀರ್ಘಾವಧಿಯಲ್ಲಿ ಇವೆಲ್ಲವೂ ಆರ್ಥಿಕ ಸ್ಥಿತಿಯ ಮೇಲೆ ಉತ್ತಮ ಪರಿಣಾಮ ಬೀರಲಿವೆ. ಲಾಕ್‌ಡೌನ್ ತೆರವು ಬಳಿಕ ಜಿಎಸ್‌ಟಿ ಸಂಗ್ರಹ ಸಹಜ ಸ್ಥಿತಿಗೆ ಮರಳುವ ಜತೆಗೆ ಸಂಗ್ರಹ ಪ್ರಮಾಣ ಹೆಚ್ಚುತ್ತಿದೆ.

ಆತ್ಮನಿರ್ಭರ ಭಾರತ ಯೋಜನೆ ಮೂಲಕ ಗ್ರಾಮೀಣ ಪ್ರದೇಶದ ಚಟುವಟಿಕೆ, ಡೈರಿ ಉದ್ಯಮ, ಪಶುಪಾಲನೆ, ಮೀನುಗಾರಿಕೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಹಂಚಿಕೆ ಆಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಉತ್ಪಾದನಾ ಕ್ಷೇತ್ರ ಚೇತರಿಕೆ ಕಾಣುವ ಜತೆಗೆ ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ ಎಂದು ಸತೀಶ್ ಕಾಶಿನಾಥ್ ಮರಾಠೆ ಹೇಳಿದರು.

ಸಹಕಾರ ಭಾರತಿ ರಾಜ್ಯಾಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಸಹಕಾರ ಸಂಘಗಳ ದ.ಕ. ಜಿಲ್ಲಾ ಉಪನಿಬಂಧಕ ಪ್ರವೀಣ್ ಬಿ. ನಾಯಕ್, ಹಿರಿಯ ಲೆಕ್ಕಪರಿಶೋಧಕ ಪ್ರಸನ್ನ ಶೆಣೈ ಅತಿಥಿಗಳಾಗಿದ್ದರು. ಸಹಕಾರ ಭಾರತಿ ರಾಜ್ಯ ಕಾರ್ಯದರ್ಶಿ ಹರೀಶ್ ಆಚಾರ್, ಮಂಗಳೂರು ಮಹಾನಗರ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಗಣೇಶ್ ಶೆಣೈ ಮರೋಳಿ ಉಪಸ್ಥಿತರಿದ್ದರು. ಮಂಗಳೂರು ಮಹಾನಗರ ಜಿಲೆ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಸ್ವಾಗತಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss