Thursday, August 11, 2022

Latest Posts

ಮುಂದಿನ 30 ತಿಂಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ: ಸಚಿವ ಡಾ.ಕೆ.ಸುಧಾಕರ್

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ನಗರದ ತೇಗೂರು ಸಮೀಪ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಡಿಸೆಂಬರ್‍ನಲ್ಲಿ ಶಂಕುಸ್ಥಾಪನೆ ನೆರವೇರಲಿದ್ದು, ಮುಂದಿನ 30 ತಿಂಗಳಲ್ಲಿ ಕಾಮಗಾರಿ ಸಂಪೂರ್ಣ ಮುಗಿದು ಭವ್ಯವಾದ ಕಟ್ಟಡ ಸಾರ್ವಜನಿಕ ಸೇವೆಗೆ ಒದಗಲಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟಿರುವ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು ನಂತರ ಸುದ್ದಿಗಾರರ ಜೊತೆ ಮಾತನಾಡಿ ಈ ವಿಷಯ ತಿಳಿಸಿದರು.
ಶಂಕುಸ್ಥಾಪನೆ ದಿನಾಂಕ ನಿಗದಿಪಡಿಸುವ ಸಂಬಂಧ ಈ ಜಿಲ್ಲೆಯ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರೊಂದಿಗೆ ಚರ್ಚಿಸಿದ್ದೇವೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಐತಿಹಾಸಿಕ ಕಾರ್ಯಕ್ರಮವೊಂದು ಇಲ್ಲಿ ನಡೆಯಲಿದೆ ಎಂದರು.
ಕಾಲೇಜು ಕಟ್ಟಡದ ವಿನ್ಯಾಸ ಅದ್ಭುತವಾಗಿದೆ. ಅದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಸೂಚನೆ ನೀಡಿದ್ದೇವೆ. 30 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಲೇಜಿನ ಸಿಬ್ಬಂದಿ ಹಾಗೂ ಅರೆಸಿಬ್ಬಂದಿಗಳ ನೇಮಕಕ್ಕೆ ರಾಜ್ಯ ಸರ್ಕಾರ ಎಂಸಿಎಗೆ ಅನುಮತಿಯನ್ನು ಸಹ ನೀಡಿದೆ. 2020-21ರಲ್ಲೇ ತರಗತಿಗಳನ್ನು ಆರಂಭಿಸಲು ಬೇಕಾದ ಬೇರೆ ಸರ್ಕಾರಿ ಕಟ್ಟಡಗಳನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲಾಗುತ್ತದೆ ಎಂದರು.
ಮೆಡಿಕಲ್ ಕಾಲೇಜು ಬರುವುದರಿಂದ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರದಲ್ಲಿ ಒಂದು ಆಸ್ಪತ್ರೆ ಮೇಲ್ದರ್ಜೆಗೇರಲಿದೆ. ಎಂಸಿಐನ ನಿಯಮಗಳ ಪ್ರಕಾರ 69 ಬೋಧಕ ಸಿಬ್ಬಂದಿಗಳನ್ನು ಜೊತೆಯಲ್ಲೇ ಅರೆಸಿಬ್ಬಂದಿಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ ಎಂದರು.
ನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದ ಕಾರಣ 400 ಹಾಸಿಗೆಗಿಂತಲೂ ಹೆಚ್ಚು ಸಾಮಥ್ರ್ಯದ ಒಂದು ಆಸ್ಪತ್ರೆ ಹಾಗೂ 200 ಹಾಸಿಗೆ ಸಾಮಥ್ರ್ಯ ತಾಯಿ ಮಗು ಆಸ್ಪತ್ರೆ ಸೇರಿ ಒಟ್ಟು 650 ಹಾಸಿಗೆಗಳ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದರು.
ಲಸಿಕೆ ಕಾರ್ಯಕ್ರಮದಲ್ಲಿ ಲೋಪವಿಲ್ಲ
ಕೋವಿಡ್-19 ನಡುವೆಯೂ ಜಿಲ್ಲೆಯಲ್ಲಿ ಮಕ್ಕಳಿಗೆ ನೀಡುವ ಇತರೆ ಲಸಿಕೆ ಕಾರ್ಯಕ್ರಮಗಳಲ್ಲಿ ಎಲ್ಲಿಯೂ ಲೋಪವಾಗಿರುವುದು ಕಂಡು ಬಂದಿಲ್ಲ. ಕೋವಿಡ್ ಹೊರತಾದ ಎಲ್ಲಾ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಕೊಟ್ಟಿದ್ದಾರೆ ಎಂದರು.
ಇದೇ ವೇಳೆ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆ ಸೇರಿದಂತೆ ವಿವಿಧ ಯೋಜನೆಯಲ್ಲಿ ಹೆಚ್ಚು ಜನರಿಗೆ ಶಸಚಿಕಿತ್ಸೆ, ಬೇರೆ ಬೇರೆ ಚಿಕಿತ್ಸೆಗಳು ನಡೆಸುವ ಜೊತೆಗೆ ಪ್ರತಿವರ್ಷ ಈ ಯೋಜನೆಯಲ್ಲಿ ಪ್ರಯೋಜನ ಪಡೆಯುವವರ ಸಂಖ್ಯ ಹೆಚ್ಚಿಸಬೇಕೆಂದು ಸೂಚನೆ ನೀಡಿದ್ದೇವೆ ಎಂದರು.
ಆರೋಗ್ಯ ಸೇವೆ ನಿಗಾಕ್ಕೆ ಸೂಚನೆ
ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಹೆಚ್ಚಾಗಬೇಕು. ಅದರಲ್ಲಿಯೂ ಶಸ್ತ್ರಚಿಕಿತ್ಸೆ ಇಲ್ಲದ ಹೆರಿಗೆ ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಆಗಾಗ ಹಠಾತ್ ಭೇಟಿ ಕೊಟ್ಟು ನ್ಯೂನತೆಗಳನ್ನು ಪರಿಶೀಲಿಸಬೇಕು. ಆರೋಗ್ಯ ಸೌಲಭ್ಯಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪುತ್ತಿದೆಯೇ ಎನ್ನುವುದರ ಬಗ್ಗೆ ಸ್ಥಳೀಯ ಆರೋಗ್ಯಾಧಿಕಾರಿಗಳು ನಿಗಾ ಇಡಬೇಕೆಂದು ಸೂಚನೆ ನೀಡಿದ್ದೇವೆ ಎಂದರು.
ಕೋವಿಡ್ ನಿರ್ವಹಣೆ ತೃಪ್ತಿಕರ
ಆರೋಗ್ಯ ಇಲಾಖೆಯ ಎಲ್ಲ ವಿಚಾರಗಳನ್ನು ಸವಿವರವಾಗಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ್ದೇವೆ. ಈ ಪೈಕಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟಿಂಗ್ ನಮಗೆ ತೃಪ್ತಿ ತಂದಿದೆ. ಆರ್‍ಟಿಪಿಸಿಆರ್‍ನಿಂದಲೇ 1300 ರಿಂದ 1400 ಪರೀಕ್ಷೆಗಳನ್ನು ಪ್ರತಿದಿನ ಮಾಡುತ್ತಿದ್ದಾರೆ. ನಾವು ನಿಗದಿ ಮಾಡಿರುವ 1900 ಪರೀಕ್ಷೆಗಳನ್ನು ಮೀರಿ ಜಿಲ್ಲಾಡಳಿತ ಪರೀಕ್ಷೆ ಮಾಡುತ್ತಿದೆ. ಜಿಲ್ಲಾಡಳಿತದ ಸಕ್ರಿಯ ಕಾರ್ಯದಿಂದ ಸೋಂಕಿತರ ಪ್ರಮಾಣ ಕಡಿಮೆಯಾಗಿದೆ. ಸಾವಿನ ಪ್ರಮಾಣ ಕೂಡ ರಾಜ್ಯ, ದೇಶದ ಸರಾಸರಿಗೆ ಹೋಲಿಕೆ ಮಾಡಿದಲ್ಲಿ ಜಿಲ್ಲೆಯಲ್ಲಿ ಕಡಿಮೆ ಇದೆ. ಅದರ ಪ್ರಮಾಣ 1.08 ರಷ್ಟಿದೆ ಎಂದರು.
ತಾಲೂಕು ಆಸ್ಪತ್ರೆಗಳ 50 ಹಾಸಿಗೆಗಳಿಗೆ ಆಕ್ಸಿಜನ್ ಕಿಟ್‍ಗಳನ್ನು ಅಳವಡಿಸಲಾಗಿದೆ. ಪ್ರಾರಂಭದಲ್ಲಿ ಈ ಜಿಲ್ಲೆ ಹಸಿರುವಲಯದಲ್ಲಿತ್ತಾದರೂ ಲಾಕ್‍ಡೌನ್ ತೆರವುಗೊಂಡ ನಂತರ ಪ್ರಕರಣಗಳು ಹೆಚ್ಚಾಗಿತ್ತು. ಈಗ ನಿಯಂತ್ರಣಕ್ಕೆ ಬಂದಿದೆ. ನಮ್ಮ ಮುಂದೆ ಹಲವು ಸವಾಲುಗಳಿವೆ. ಚಳಿಗಾಲದ ಜೊತೆಗೆ ಹಬ್ಬಗಳು ಇರುವುದರಿಂದ ಜನರು ಇನ್ನಷ್ಟು ಮುಂಜಾಗ್ರತೆ ವಹಿಸಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ಎಲ್ಲಾ ಮಾರ್ಗಸೂಚಿ ಪಾಲನೆ
ಕೋವಿಡ್ ನಿಯಂತ್ರಣ ನಿಯಮಗಳ ಪ್ರಕಾರ ಈ ಜಿಲ್ಲೆಯಲ್ಲಿ ಖಾಸಗಿ ಸಣ್ಣ ಮತ್ತು ದೊಡ್ಡ ಆಸ್ಪತ್ರೆಗಳು ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಿವೆ. ಅದನ್ನು ಉಲ್ಲಂಘಿಸಿದಲ್ಲಿ ಆಸ್ಪತ್ರೆಗಳ ಪರವಾನಗಿಯನ್ನು ಶಾಶ್ವತವಾಗಿ ರದ್ದುಪಡಿಸಲಾಗುವುದು. ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಹೆಚ್ಚು ಶುಲ್ಕ ವಸೂಲಿ ಮಾಡಬಾರದು ಎಂದರು.
ದೂರಿನಲ್ಲಿ ಸತ್ಯಾಂಶವಿಲ್ಲ
ನಗರದ ಖಾಸಗಿ ಆಸ್ಪತ್ರೆಯೊಂದರ ವಿರುದ್ಧ ಕೊರೊನಾ ಚಿಕಿತ್ಸೆಗೆ ದುಬಾರಿ ದರ ವಸೂಲಿ ಮಾಡಿರುವ ದೂರು ಬಂದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ದೂರಿನ ಬಗ್ಗೆ ಜಿಲ್ಲಾಧಿಕಾರಿಗಳು ವಸ್ತುಸ್ಥಿತಿ ವರದಿಯನ್ನು ಇಲಾಖೆಗೆ ಕಳುಹಿಸಿಕೊಟ್ಟಿದ್ದಾರೆ. ಇಲಾಖೆಯ ಕಾರ್ಯದರ್ಶಿಗಳು ಅದೆಲ್ಲವನ್ನು ಪರಿಶೀಲಿಸಿದ್ದು ದೂರಿನಲ್ಲಿ ಕೊಟ್ಟಿರುವ ಅಂಶಗಳು ಸತ್ಯಕ್ಕೆ ದೂರವಾಗಿದೆ ಎಂದು ವರದಿಯನ್ನು ನಿಖರವಾಗಿ ತಿಳಿಸಿರುವುದರಿಂದ ಅವರ ಮೇಲೆ ಯಾವುದೇ ಕ್ರಮ ವಹಿಸಿಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss