Monday, August 8, 2022

Latest Posts

ಮುಂದುವರಿದ ಕಾಡಾನೆ ಹಾವಳಿ: ನೂರಾರು ಎಕರೆ ಬೆಳೆ ನಾಶ: ಅರಣ್ಯ ಇಲಾಖೆಯ ಗೊಂದಲದಿಂದ ರೈತರಿಗೆ ಸಂಕಷ್ಟ!

ಕುಶಾಲನಗರ: ಕಾಡಾನೆಗಳ ದಾಳಿಯಿಂದ ಬೆಳೆ ನಷ್ಟಕ್ಕೊಳಗಾದ ರೈತರು ಅರಣ್ಯ ಇಲಾಖೆಯ ವಲಯಗಳ ನಡುವಿನ ಗೊಂದಲದಿಂದ ಸಂಕಷ್ಟಕ್ಕೆ ಒಳಗಾಗುತ್ತಿರುವುದು ಕಂಡು ಬಂದಿದೆ.
ಆನೆಕಾಡು ವ್ಯಾಪ್ತಿಯಿಂದ ಅತ್ತೂರು ಅರಣ್ಯ, ಬೆಂಡೆಬೆಟ್ಟದ ಮೂಲಕ ಸಾಗಿ ಹಾರಂಗಿ ನದಿಯನ್ನು ದಾಟಿಕೊಂಡು ಬಂದು ಹುದುಗೂರು ಗ್ರಾಮ ಸೇರಿದಂತೆ ಸುತ್ತಮುತ್ತಲ ಆರು ಗ್ರಾಮಗಳಲ್ಲಿ ಕಾಡಾನೆಗಳು ದಾಳಿ ಮಾಡಿ ಈ ವ್ಯಾಪ್ತಿಯ ನೂರಾರು ಎಕರೆಗಳಷ್ಟು ಪ್ರದೇಶದ ಬೆಳೆಯನ್ನು ಸಂಪೂರ್ಣವಾಗಿ ನಾಶಪಡಿಸಿವೆ. ಆನೆಗಳು ಬರುವುದು ಕುಶಾಲನಗರ ಅರಣ್ಯ ವಲಯದಿಂದಾದರೆ, ಬೆಳೆ ನಾಶವಾಗುವುದು ಸೋಮವಾರಪೇಟೆ ಅರಣ್ಯ ವಲಯದಲ್ಲಿ. ಅರಣ್ಯ ಇಲಾಖೆಯ ಈ ವಲಯಗಳ ಅವಾಂತರದಿಂದಾಗಿ ರೈತರು ಶಾಶ್ವತವಾದ ಪರಿಹಾರವಿಲ್ಲದೆ ಭಾರೀ ನಷ್ಟ ಅನುಭವಿಸುತ್ತಿದ್ದಾರೆ.
ಕುಶಾಲನಗರ ವಲಯಕ್ಕೆ ಸೇರಿದ ಬೆಂಡೆಬೆಟ್ಟ ಮೂಲಕ ಬರುವ ಕಾಡಾನೆಗಳು ಸಮೀಪದಲ್ಲಿ ಹರಿಯುವ ಹಾರಂಗಿ ನದಿಯನ್ನು ದಾಟಿಕೊಂಡು ಪಕ್ಕದಲ್ಲಿ ಬೇಸಾಯ ಮಾಡಿರುವ ಹಾರಂಗಿ ಅಚ್ಚುಕಟ್ಟು ಪ್ರದೇಶದ ನೂರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾದ ಭತ್ತ, ಬಾಳೆ, ಶುಂಠಿ, ಕೇನೆ, ಕೆಸ, ಸಿಹಿಗೆಣಸು ಸೇರಿದಂತೆ ಅನೇಕ ಬಗೆಯ ಬೆಳೆಗಳನ್ನು ನಾಶಪಡಿಸಿವೆ.
ಕುಶಾಲನಗರ ಅರಣ್ಯ ಇಲಾಖೆ ಮತ್ತು ಅದಕ್ಕೆ ಸೇರಿದ ಉಪ ವಲಯದವರು ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ಕಳೆದ ಒಂದು ವರ್ಷದಿಂದ ನಡೆಸುತ್ತಿದ್ದರೂ, ಕಾಡಾನೆಗಳು ಮಾತ್ರ ನಾಡು ಬಿಟ್ಟು ಕಾಡಿಗೆ ಹೋಗುತ್ತಿಲ್ಲ.
ಮರಿಯಾನೆಗಳೂ ಸೇರಿದಂತೆ 20ಕ್ಕೂ ಹೆಚ್ಚು ಆನೆಗಳು ಇದೀಗ ಎರಡು ಪ್ರತ್ಯೇಕ ಗುಂಪುಗಳಲ್ಲಿ ಕಳೆದ ಬೇಸಗೆಯಿಂದ ಇಂದಿನ ಭತ್ತದ ನಾಟಿಯನ್ನು ಧ್ವಂಸ ಮಾಡುವವರೆಗೂ ಮುಂದುವರಿದಿದೆ. ಆದರೆ ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಕ್ಕೆ ಮುಂದಾಗದೆ ಈ ವಲಯ ನಮಗೆ ಸೇರುವುದಿಲ್ಲ ನೆಪ ಹೇಳುತ್ತಿದ್ದಾರೆ ಎಂಬುದು ರೈತರ ಆರೋಪವಾಗಿದೆ.
ರೈತರ ಬೆÉಳೆ ನಷ್ಟಕ್ಕೆ ಪರಿಹಾರ ನೀಡಲು ಸೋಮವಾರಪೇಟೆ ವಲಯದವರು ಬಂದು ನೋಡಿ ಹೋಗುತ್ತಾರೆ. ಆದರೆ ಕಾಡಾನೆಗಳು ದಿನಂಪ್ರತಿ ದಾಳಿ ಮಾಡಿ ನಾಟಿ ಮಾಡಿದ ಗದ್ದೆಗಳು ಸೇರಿದಂತೆ ಎಲ್ಲಾ ಬೆಳೆಗಳನ್ನು ಹಾಳು ಮಾಡುತ್ತಿವೆ.
ಈ ವ್ಯಾಪ್ತಿಯು ಹಾರಂಗಿ ಅಚ್ಚುಕಟ್ಟು ಪ್ರದೇಶವಾಗಿದೆ. ಈ ವ್ಯಾಪ್ತಿಯ ಹುದುಗೂರು ಕಾಳಿದೇವನ ಹೊಸೂರು, ಮಾವಿನಹಳ್ಳ, ಮದಲಾಪುರ, ಸೀಗೆಹೂಸೂರು, ಯಡವನಾಡು ಸೇರಿದಂತೆ ಆರು ಉಪ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ದನಗಳಿಗೂ ಹುಲ್ಲು ಇಲ್ಲದಾಗಿದೆ. ಇತ್ತ ಬೆಳೆಯಿಲ್ಲದೆ ರೈತರಿಗೆ ತಿನ್ನಲು ಅನ್ನ ಇಲ್ಲದಂತಾಗಿದೆ.
ಕಳೆದ ಒಂದು ವರ್ಷದ ಹಿಂದೆ ಜಿಲ್ಲಾ ಮಟ್ಟದ ಅರಣ್ಯ ಇಲಾಖೆಯ ಸಂರಕ್ಷಣಾಧಿಕಾರಿಗಳು ಸೇರಿದಂತೆ ವಿವಿಧ ವಿಭಾಗದ ಅಧಿಕಾರಿಗಳು ಅಲ್ಲದೆ ಮೈಸೂರು ವಿಭಾಗದ ಅರಣ್ಯ ಇಲಾಖೆಯ ಅಧಿಕಾರಿಗಳು ಬೆಳೆ ನಷ್ಟವಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ನೀಡುವ, ಕಾಡಾನೆಗಳು ಬೆಂಡೆಬೆಟ್ಟದಿಂದ ಬರದ ಹಾಗೆ ರೆಲ್ವೆ ಕಂಬಿಗಳನ್ನು ಬಳಸಿ ಬೇಲಿ ನಿರ್ಮಿಸುವ ಭರವಸೆ ನೀಡಿದ್ದರೂ, ಅದು ಭರವಸೆಯಾಗಿಯೇ ಉಳಿದಿದೆ.
ಕಳೆದ ಒಂದು ವಾರದಿಂದ ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದರೂ, ಅಧಿಕಾರಿಗಳು ಮಾತ್ರ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ಅಧಿಕಾರಿಗಳು ಮಾತ್ರ ಕಾಡಾನೆಗಳು ಹಾರಂಗಿ ನದಿ ದಾಟಿ ಬಂದರೆ ಆ ವಲಯ- ಈ ವಲಯ ಎಂದು ಹೇಳುತ್ತಾ ದಿನ ಕಳೆಯುತ್ತಿದ್ದಾರೆಯೇ ವಿನಹ ಕಾಡಾನೆಗಳನ್ನು ಕಾಡಿಗೆ ಓಡಿಸುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಸುಮಾರು 25ಕ್ಕೂ ಅಧಿಕ ಕಾರ್ಯ ಪ್ರಗತಿಯಲ್ಲಿ ಇಲ್ಲಾ ಎಂದು ಎಲ್ಲಾ ರೀತಿಯಲ್ಲಿ ನೊಂದ ರೈತರು ತಮ್ಮ ಮನದಂಳದ ಮಾತ ರೈತರು ಪತ್ರಿಕೆಯೊಂದಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಬಾರಿ ಗದ್ದೆ ನಾಟಿ ಮಾಡಿದ್ದು, ಇನ್ನು ಸ್ವಲ್ಪ ದಿನಗಳವರೆಗೆ ನೋಡಿ ನಂತರವೂ ಹಾಳಾದರೆ ಬೇಸಾಯವನ್ನೇ ಕೈಬಿಡುವುದಾಗಿ ರೈತರು ನೋವು ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss