ಬೆಂಗಳೂರು: ವಿಶ್ವದಲ್ಲಿ ಕೊರೋನಾ ಬಿಕ್ಕಟ್ಟು ಎದುರಾಗಿದ್ದು, ಆರ್ಥಿಕ ಬಿಕ್ಕಟ್ಟು ಎಲ್ಲೆಡೆ ಎದುರಾಗಿದೆ. ಆದರೆ ಮುಕೇಶ್ ಅಂಬಾನಿ ಮಾತ್ರ ಇದಕ್ಕೆ ಹೊರತಾಗಿದ್ದಾರೆ. ಏಕೆಂದರೆ ಹರೂನ್ ಸಿದ್ಧಪಡಿಸುವ ವಿಶ್ವದ ಐದು ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತದ ಏಕೈಕ ವ್ಯಕ್ತಿ ಮುಕೇಶ್ ಅಂಬಾನಿ.
ಹರೂನ್ ಇಂಡಿಯಾ ಸಿದ್ಧಪಡಿಸಿರುವ 2020ನೇ ಸಾಲಿನ ಭಾರತದ ಶ್ರೀಮಂತರ ಪಟ್ಟಿ ಬಿಡುಗಡೆ ಆಗಿದೆ. ಮುಕೇಶ್ ಅಂಬಾನಿ ಅವರು ಸತತ 9ನೇ ವರ್ಷದಲ್ಲಿಯೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಮಾಧ್ಯಮಗಳ ವರದಿ ಪ್ರಕಾರ ಲಾಕ್ ಡೌನ್ ಅವಧಿಯಲ್ಲಿ ಮುಕೇಶ್ ಅಂಬಾನಿ ಪ್ರತಿ ಗಂಟೆಗೆ ಬರೋಬ್ಬರಿ 90 ಕೋಟಿ ರೂಪಾಯಿಗಳನ್ನು ಸಂಪಾದಿಸಿದ್ದಾರೆ ಎಂದು ಹೇಳಲಾಗಿದೆ. ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಆಸ್ತಿ ಮೌಲ್ಯ ಶೇ.73 ರಷ್ಟು ಏರಿಕೆಯಾಗಿ ಈಗ 6.59 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹ್ಯಾಪಿಯೆಸ್ಟ್ ಮೈಂಡ್ಸ್ ಕಂಪನಿಯ ಸಂಸ್ಥಾಪಕ ಅಶೋಕ್ ಸೂಟಾ ಅವರು ಈ ವರ್ಷ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಆಸ್ತಿಯ ಮೌಲ್ಯ 3,700 ಕೋಟಿ. ಅವರು ಇತ್ತೀಚೆಗಷ್ಟೇ ತಮ್ಮ ಕಂಪನಿಯ ಷೇರುಗಳನ್ನು ಸಾರ್ವಜನಿಕ ಮುಕ್ತವಾಗಿಸಿದ್ದರು.