ಹೊಸ ದಿಗಂತ ವರದಿ ಮೈಸೂರು:
ಮರ್ಯಾದ ಪುರುಷೋತ್ತಮ ಶ್ರೀರಾಮನ ಬಗ್ಗೆ ಪದೇ ಪದೇ ಅವಹೇಳನ ಮಾಡುತ್ತಿರುವ ಹಿರಿಯ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರ ಮೈಸೂರಿನಲ್ಲಿರುವ ಮನೆಗೆ ಇದೀಗ ಪೊಲೀಸ್ ಭದ್ರತೆಯನ್ನು ನೀಡಲಾಗಿದೆ.
ಶ್ರೀರಾಮನ ಕುರಿತು ಅವಹೇಳನ ಮಾಡಿದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಪ್ರೊ. ಕೆ.ಎಸ್.ಭಗವಾನ್, ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದಾಗ ವಕೀಲೆ ಮೀರಾ ರಾಘವೇಂದ್ರ ಅವರು ಮುಖಕ್ಕೆ ಮಸಿ ಬಳಿದು ಛೀಮಾರಿ ಹಾಕಿದ್ದರು. ಘಟನೆಯ ಬಳಿಕ ವಕೀಲೆಯ ವಿರುದ್ಧ ಕೆ.ಎಸ್.ಭಗವಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ವಕೀಲೆ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಈ ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ಮೈಸೂರು ನಗರ ಪೊಲೀಸ್ ಅಧಿಕಾರಿಗಳು, ಕುವೆಂಪು ನಗರ ಕಾಂಪ್ಲೇಕ್ಸ್ ಬಳಿಯಿರುವ ಕೆ.ಎಸ್.ಭಗವಾನ್ ಮನೆಗೆ ಪೊಲೀಸ್ ಭದ್ರತೆ ನೀಡಿದ್ದಾರೆ.
ಅಲ್ಲದೇ ಅವರ ರಕ್ಷಣೆಗಾಗಿ ಗನ್ಮ್ಯಾನ್ನ್ನೂ ಸಹ ನಿಯೋಜಿಸಲಾಗಿದೆ. ಅಷ್ಟೇ ಅಲ್ಲ, ಮೈಸೂರಿನ ತಮ್ಮ ಮನೆಯಲ್ಲಿ ಯಾವುದೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಂತೆ ಮೈಸೂರು ನಗರ ಪೊಲೀಸ್ ಕಮಿಷನರ್ ಅವರು ಭಗವಾನ್ಗೆ ಸೂಚಿಸಿದ್ದಾರೆ.