ಬೆಂಗಳೂರು: ರಾಜ್ಯ ಸರಕಾರ ಕೋವಿಡ್ -19 ನಿಯಂತ್ರಣಕ್ಕಾಗಿ ನಡೆಸುತ್ತಿರುವ ಹೋರಾಟಗಳಿಗೆ ವಿರೋಧ ಪಕ್ಷಗಳಿಂದಲೇ ಶಹಬಾಸ್ ಗಿರಿ ಸಿಕ್ಕಿದೆ! ನಗರದಲ್ಲಿಂದು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ವಿರೋಧ ಪಕ್ಷದ ನಾಯಕರ ಜೊತೆ ಸಭೆಯಲ್ಲಿ ಸರ್ಕಾರ ಕೈಗೊಂಡ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತವಾಯಿತಲ್ಲದೆ, ಸೋಂಕು ನಿಯಂತ್ರಣಕ್ಕಾಗಿ ಸರಕಾರದ ಎಲ್ಲಾ ನಿರ್ಧಾರ ಗಳಿಗೆ ಸಾಥ್ ನೀಡುವುದಾಗಿ ಮುಖಂಡರು ಭರವಸೆಯನ್ನೂ ನೀಡಿದ್ದಾರೆ.
ವಿರೋಧ ಪಕ್ಷಗಳು ಸಿದ್ಧಪಡಿಸಿದ ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಕೊರೋನಾ ಸೋಂಕು ನಿವಾರಣೆ ಹಾಗೂ ಲಾಕ್ಡೌನ್ನಿಂದಾಗಿ ಉಂಟಾಗಿರುವ ಜನರ ಸಂಕಷ್ಟಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕನಿಷ್ಟ ರೂ.50,000 ಕೋಟಿ ರೂ.ಗಳ ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವಂತೆ ರಾಜ್ಯ ಸರ್ಕಾರ ಒತ್ತಾಯಿಸಬೇಕು. ರಾಜ್ಯವ್ಯಾಪಿ ರೈತರು ಬೆಳೆದಿರುವ ಹೂವು, ಹಣ್ಣು, ತರಕಾರಿ ಹಾಗೂ ಬೆಳೆಗಳ ಕಟಾವಿಗೆ ಅವಕಾಶ ಕಲ್ಪಿಸುವುದು ಮತ್ತು ಮಾರಾಟ ಮಾಡಲು ಸೂಕ್ತ ಸಾರಿಗೆ ವ್ಯವಸ್ಥೆ ಮತ್ತು ಮಾರುಕಟ್ಟೆ ಒದಗಿಸಬೇಕು ಎಂದು ಬೇಡಿಕೆ ಇಟ್ಟರು.
ರೈತರು ಬೆಳೆದಿರುವ ಸದರಿ ಪದಾರ್ಥಗಳನ್ನು ವ್ಯಾಪಾರಸ್ಥರು ತೆಗೆದುಕೊಳ್ಳದೆ ಇದ್ದ ಸಂದರ್ಭದಲ್ಲಿ ಸರ್ಕಾರವೇ ರೈತರ ಹೊಲದಿಂದ ನೇರವಾಗಿ ಬೆಳೆದ ಪದಾರ್ಥಗಳನ್ನು ಖರೀದಿಸಿ, ರೈತರಿಗೆ ಸಹಾಯ ಮಾಡುವುದು. ಲಾಕ್ಡೌನ್ ಅವಧಿಯಲಿ ನಷ್ಟ ಅನುಭವಿಸಿರುವ ರೈತರಿಗೆ ನಷ್ಟ ಪರಿಹಾರ ನೀಡುವುದು ಹಾಗೆಯೆ ಕೋಳಿ ಸಾಕಾಣಿಕೆ ಮಾಡಿ ಮಾರಾಟವಾಗದೆ ನಷ್ಟ ಅನುಭವಿಸಿರುವ ರೈತರಿಗೂ ಸಹ ಸೂಕ್ತ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರೈತರು ಬೆಳೆದ ಬೆಳೆ, ತರಕಾರಿ, ಹಣ್ಣು, ಹೂವು, ಪೌಲ್ಟ್ರಿ, ರೇಷ್ಮೆ ಮುಂತಾದ ಉತ್ಪನ್ನಗಳನ್ನು ಬೆಳೆದು ರೈತರು ನಷ್ಟದ ಕುರಿತು ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿ, ನ್ಯಾಯೋಚಿತವಾಗಿ ಕನಿಷ್ಟ ಶೇ.50% ರಷ್ಟು ಪರಿಹಾರವನ್ನು ಸಮರೋಪಾದಿಯಲ್ಲಿ ನೀಡಬೇಕು. ರೈತರು ಬೆಳೆದ ಪ್ರತಿ ಪದಾರ್ಥಗಳಿಗೂ ಉತ್ಪಾದನಾ ವೆಚ್ಚವನ್ನು ಆಧರಿಸಿ, ನಿಗದಿತ ಬೆಲೆಯನ್ನು ತುರ್ತಾಗಿ ನಿಗದಿ ಮಾಡುವುದು. ನಿಗದಿ ಮಾಡಿದ ದರಗಳಿಗಿಂತ ಬೆಲೆ ಕಡಿಮೆಯಾದರೆ ಸರ್ಕಾರವು ಮಧ್ಯ ಪ್ರವೇಶ ಮಾಡಿ ಪ್ರೋತ್ಸಾಹ ಧನ/ಬೆಂಬಲ ಬೆಲೆ ನೀಡಲು 5000 ಕೋಟಿ ರೂಗಳ ಆವರ್ತ ನಿಧಿಯನ್ನು ಸ್ಥಾಪಿಸಿ, ಆ ನಿಧಿಯನ್ನು ಬಳಸಿ ಎ.ಪಿ.ಎಂ.ಸಿ.ಗಳ ಮೂಲಕ ರೈತರ ಉತ್ಪನ್ನಗಳನ್ನು ಖರೀದಿಸಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ತಿಳಿಸಿದರು.
ಸರ್ಕಾರ ಈ ಕೂಡಲೇ ಬರಪೀಡಿತ ತಾಲ್ಲೂಕುಗಳಿಗೆ ನೀಡಬೇಕಾದ ಸವಲತ್ತುಗಳನ್ನು ನೀಡುವುದು. ಬರಗಾಲದಿಂದ ನಷ್ಟವಾಗಿರುವ ಬೆಳೆಗಳಿಗೂ ಸರ್ಕಾರ ಪರಿಹಾರ ನೀಡಬೇಕು. ಪೂರ್ವ ಮುಂಗಾರಿನ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಭತ್ತ, ಬಾಳೆ, ದ್ರಾಕ್ಷಿ, ಮಾವು, ಟೊಮೆಟೊ ಮುಂತಾದ ಬೇಸಿಗೆಯ ಬೆಳೆಗಳು ತೀವ್ರ ರೀತಿಯ ಹಾನಿಗೆ ಒಳಗಾಗಿವೆ. ಹಾನಿಗೊಳಗಾದ ಪ್ರದೇಶ ಎಷ್ಟು ಎಂಬುದರ ಕುರಿತು ಸಮರ್ಪಕವಾಗಿ ಜಂಟಿ ಸರ್ವೆ ನಡೆಸುವುದು ಮತ್ತು ಪ್ರತಿ ಹೆಕ್ಟೆರ್ಗೆ ನೀಡುತ್ತಿರುವ ಪರಿಹಾರ ಮೊತ್ತವಾದ ರೂ.13,500/- ಗಳನ್ನು ಈ ಹಿಂದೆ ನೀಡಿದಂತೆ ರೂ.25,000/-ಗಳಿಗೆ ಹೆಚ್ಚಿಸಬೇಕು ಎಂದು ಹೇಳಿದರು.
ರಾಜ್ಯದಲ್ಲಿ ರೈತರಿಗೆ ಪಾವತಿಸಬೇಕಾದ ಕಬ್ಬಿನ ಬಾಕಿ ಹಣ ಸುಮಾರು ರೂ.3,000/- ಕೋಟಿ ತುರ್ತಾಗಿ ಪಾವತಿಸುವಂತೆ ಆದೇಶ ಮಾಡಬೇಕು. ತೊಗರಿ ಬೆಳೆಗಾರರಿಗೆ ಬಾಕಿ ಹಣವನ್ನು ರೈತರಿಗೆ ಬಿಡುಗಡೆ ಮಾಡಬೇಕು.
ಎಲ್ಲ ಸಹಕಾರಿ/ವಾಣಿಜ್ಯ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕನಿಷ್ಟ ರೂ.10,000/- ಕೋಟಿಗಳನ್ನು ಬಿಡುಗಡೆ ಮಾಡಿ, ರೈತರಿಗೆ ಸಾಲ ಸೌಲಭ್ಯ ಒದಗಿಸಬೇಕು ಎಂದರು.
ರೈತರಿಗೆ ಬೇಕಾದ ಬಿತ್ತನೆ ಬೀಜ, ಗೊಬ್ಬರ, ಅಗತ್ಯ ಔಷಧಿ ಹಾಗೂ ಇತರೇ ಸಲಕರಣೆಗಳನ್ನು ರೈತರಿಗೆ ಉಚಿತವಾಗಿ ನೀಡಲು ಕ್ರಮ ಜರುಗಿಸುವುದು. ವಿವಿಧ ಬ್ಯಾಂಕುಗಳಲ್ಲಿ ರೈತರಿಗೆ ನೀಡಿರುವ ಸಾಲ ವಸೂಲಾತಿ ಕೊರೋನ ಅವಧಿ ಮುಗಿಯುವವರೆಗೂ ಷರತ್ತು ರಹಿತವಾಗಿ ಮುಂದೂಡಲು ಹಾಗೂ ಈ ಅವಧಿಯ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದರು.
ಲಾಕ್ಡೌನ್ ಕಾರಣದಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ನಿರ್ವಹಿಸಲು ಸಾಧ್ಯವಾಗದ ಅವಧಿಗೆ ನೋಂದಾಯಿತ ಕಾರ್ಮಿಕರಿಗೆ ನಿಗದಿತ ವೇತನವನ್ನು ಕಡ್ಡಾಯವಾಗಿ ನೀಡಲು ಕ್ರಮವಹಿಸಬೇಕು ಎಂದು ಹೇಳಿದರು.
ಸಾಂಪ್ರದಾಯಿಕ ವೃತ್ತಿ ನಡೆಸುವವರು, ಸಿನಿಮಾ, ಟಿ.ವಿ., ಧಾರವಾಹಿಗಳಲ್ಲಿ ಕೆಲಸ ಮಾಡುವ ಕಲಾವಿದರು, ಕಾರ್ಮಿಕರು ಮತ್ತು ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುವ ಕಾರ್ಮಿಕರು. ಮತ್ತು ಬೀದಿ ಬದಿಯ ವ್ಯಾಪಾರಿಗಳು, ಅಲೆಮಾರಿ ಸಮುದಾಯಗಳು, ಮಂಗಳಮುಖಿಯರು, ದೇವದಾಸಿಯರು, ಅಂಗವಿಕಲರು, ಪ್ಲಾಂಟೇಶನ್ ಕಾರ್ಮಿಕರು, ಟಾಂಗಾ ಚಾಲಕರು, ದರ್ಜಿಗಳ, ಪೋಟೋಗ್ರಾಫರ್ಗಳು, ಆಟೋ, ಕ್ಯಾಬ್, ಟ್ರಕ್, ಲಾರಿ, ಮುಂತಾದ ವಾಹನ ಚಾಲಕರು, ಕ್ಲೀನರ್ಗಳು, ಅಡುಗೆ ಕೆಲಸದವರು, ಹಮಾಲಿಗಳು, ಪೌರ ಕಾರ್ಮಿಕರು, ದೇವಸ್ಥಾನದ ಅರ್ಚಕರುಗಳು, ಸಣ್ಣಪುಟ್ಟ ವ್ಯಾಪಾರಸ್ಥರುಗಳಿಗೆ ಮತ್ತು ಕಟ್ಟಡ ಕಾರ್ಮಿಕರು, ಗಾರ್ಮೆಂಟ್ಸ್ ಕಾರ್ಮಿಕರು, ಮನೆ ಕೆಲಸದವರು, ನರೇಗಾ ಕಾರ್ಮಿಕರು, ಕೃಷಿ ಕೂಲಿ ಕಾರ್ಮಿಕರು ಮುಂತಾದ ಎಲ್ಲಾ ರೀತಿಯ ಕಾರ್ಮಿಕರಿಗೆ ಕೊರೊನಾ ಮುಗಿಯುವವರೆಗೆ ಪ್ರತಿ ತಿಂಗಳು ಹತ್ತು ಸಾವಿರ ರೂ. ನೀಡಬೇಕು ಎಂದರು.
ಸಂಘಟಿತ, ಅಸಂಘಟಿತ ವಲಯದ ಕಾರ್ಮಿಕರಿಗೂ ಪ್ರತಿ ತಿಂಗಳು ಹತ್ತು ಸಾವಿರ ರೂ. ನೀಡುವುದು. ಜಾನುವಾರುಗಳಿಗೆ ಉಚಿತವಾಗಿ ಹಿಂಡಿ, ಬೂಸಾ, ಮೇವು ಮತ್ತು ಪಶು ಆಹಾರಗಳನ್ನು ಉಚಿತವಾಗಿ ನೀಡಲು ಸರ್ಕಾರ ವಿಶೇಷ ಪ್ಯಾಕೇಜ್ನ್ನು ರೂಪಿಸಬೇಕು ಎಂದು ತಿಳಿಸಿದರು.
ವಿವಿಧ ಕಾರಣಗಳಿಂದ ಮರಣ ಹೊಂದುವ ಕುರಿ, ಮೇಕೆ, ಹಸು, ಎತ್ತು, ಎಮ್ಮೆ ಮುಂತಾದವುಗಳಿಗೆ ರೂ.5,000/- ದಿಂದ ರೂ.10,000/- ಗಳವರೆಗೆ ಅನುಗ್ರಹ ಯೋಜನೆಯಡಿ ಪರಿಹಾರ ನೀಡಲಾಗುತ್ತಿತ್ತು. ಇದನ್ನು ಸರ್ಕಾರ ಇತ್ತೀಚಿಗೆ ನಿಲ್ಲಿಸಿದೆ. ರೈತರ ಹಿತದೃಷ್ಟಿಯಿಂದ ಸದರಿ ಯೋಜನೆಯನ್ನು ಮುಂದುವರೆಸಿ ಮರಣ ಹೊಂದಿದ ಜಾನುವಾರುಗಳಿಗೆ ಪರಿಹಾರ ನೀಡಲು ಕ್ರಮವಹಿಸುವುದು. ನೇಕಾರರಿಗೆ ಘೋಷಣೆ ಮಾಡಿರುವ ಪ್ಯಾಕೇಜ್ ನಲ್ಲಿ ಕಂಬಳಿ ನೇಕಾರರ ಸೇರ್ಪಡೆ ಮಾಡಬೇಕು ಎಂದರು.
ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್. ಡಿ.ರೇವಣ್ಣ, ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.