Wednesday, July 6, 2022

Latest Posts

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಗರಂ

ಹೊಸದಿಗಂತ ವರದಿ ಮೈಸೂರು

ಸಚಿವ ಸಂಪುಟ ವಿಸ್ತರಣೆ, ನಿಗಮಮಂಡಳಿಗಳಿಗೆ ಅಧ್ಯಕ್ಷರ ನೇಮಕದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ವಿರುದ್ಧ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ಮೈಸೂರು ಜಿಲ್ಲೆಯ ನಂಜನಗೂಡಿನ ಸುತ್ತೂರು ಶ್ರೀಕ್ಷೇತ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾ ಕೆ.ಎಸ್.ಈಶ್ವರಪ್ಪ, ನಾರಾಯಣಗೌಡ, ಎಸ್.ಟಿ.ಸೋಮಶೇಖರ್ ಎಲ್ಲರೂ ಹಳೇ ಮೈಸೂರು ಭಾಗದವರೇ, ಇನ್ನೇ ಎಷ್ಟು ಸಚಿವ ಸ್ಥಾನವನ್ನು ನೀಡುತ್ತೀರಾ, ಎಲ್ಲರನ್ನೂ ಗುಡ್ಡೆ ಹಾಕಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವಾಗ ನನ್ನ ಪಾತ್ರ ಇತ್ತು. ಈಗ ಅವರು ಮುಖ್ಯಮಂತ್ರಿಯಾಗಿ ಆರಾಮವಾಗಿ ಇದ್ದಾರೆ, ಇನ್ನೇನು ಅವರಿಗೆ ಯಾರ ದರ್ದು ಇಲ್ಲ, ನಾವು ನೋಡಿಕೊಳ್ಳುತ್ತೇವೆ ಎಂದು ಗುಡುಗಿದರು.

ನಂಜನಗೂಡಿನ ಶಾಸಕ ಹರ್ಷವರ್ಧನ್ ಸಂಸದ ವಿ.ಶ್ರೀನಿವಾಸ್ ಪ್ರಸಾದ್‌ರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿ, ಇಲ್ಲವೇ ನನಗೆ ಸಚಿವ ಸ್ಥಾನ ನೀಡಿ ಎಂದು ಕೇಳಿರುವುದಕ್ಕೆ ಪ್ರತಿಕ್ರಿಯಿಸಿದ ವಿ.ಶ್ರೀನಿವಾಸ್ ಪ್ರಸಾದ್, ಅದು ಅವರ ವೈಯಕ್ತಿಕ ಹೇಳಿಕೆ, ಅದಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ, ಚುನಾವಣೆಯಲ್ಲಿ ಸ್ಪರ್ಧಿಸುವುದೆ ಬೇಡಾ ಎಂದು ಕೊಂಡಿದ್ದೇ, ಆದರೆ ಅನಿವಾರ್ಯವಾಗಿ ಸ್ಪರ್ಧಿಸಿ, ಸಂಸದನಾಗಿದ್ದೇನೆ, ನನಗೆ ಕೇಂದ್ರದಲ್ಲಿ ಸಚಿವ ಸ್ಥಾನ ಬೇಡಾ ಎಂದು ನಾನೇ ಹೇಳಿದ್ದೇ ಎಂದು ತಿಳಿಸಿದರು. ಹಳೇ ಮೈಸೂರು ಭಾಗದಿಂದ ಕೇಂದ್ರ ಸಚಿವರಾಗಿ ಡಿ.ವಿ.ಸದಾನಂದಗೌಡರು ಇದ್ದಾರೆ, ಹಾಗಾಗಿ ಇನ್ನೇಷ್ಟು ಜನರಿಗೆ ಸಚಿವ ಸ್ಥಾನ ನೀಡುತ್ತಾರೆ ಎಂದರು.

ಸಂಸದರಾಗಿ ಒಂದುವರೆ ವರ್ಷದಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್‌ರ ಕೊಡುಗೆ ಏನು, ಏನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ನೀಡಿರುವ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ವಿ.ಶ್ರೀನಿವಾಸ್ ಪ್ರಸಾದ್, ಆತ ನನ್ನ ಉಗುರಿಗೂ ಸಮಾನನಲ್ಲ, ಆತನ ಹೇಳಿಕೆಯೇ ಬಾಲಿಶತನವಾಗಿದೆ. ಎರಡು ಬಾರಿ ಸಂಸದರಾಗಿದ್ದನು ಈ ರೀತಿಯ ಹೇಳಿಕೆ ನೀಡುವುದಾ, ಅದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಆತನ ಹೇಳಿಕೆಗೆ ಅವರ ಪಕ್ಷದವರು ಹೇಳುವಂತೆ ಯಾವುದೇ ಕಿಮ್ಮತ್ತು ಇಲ್ಲ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss