ಚಿತ್ರದುರ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ನಾಯಕ. ಅವರು ನನ್ನನ್ನು ಸಮುದ್ರದಲ್ಲಿ ಹಾಕಿದರೂ ನಾನು ಅಲ್ಲಿ ನೆಮ್ಮದಿಯಾಗಿರುತ್ತೇನೆ ಇದು ಹೊಳಲ್ಕೆರೆ ಶಾಸಕ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷ ಎಂ.ಚಂದ್ರಪ್ಪ ಅವರ ಸ್ಪಷ್ಟ ನುಡಿಯಿದು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಎಂ.ಚಂದ್ರಪ್ಪ ಈ ಕುರಿತು ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಂಬಿದವರನ್ನು ಯಾರನ್ನೂ ಕೈಬಿಟ್ಟಿಲ್ಲ. ಹಾಗಾಗಿ ನನ್ನನ್ನೂ ಅವರಿಂದ ಯಾವುದೇ ಅನ್ಯಾಯವಾಗುವುದಿಲ್ಲ ಎಂಬ ನಂಬಿಕೆ ನನ್ನದು. ಹಾಗಾಗಿ ನಾನು ಸದಾ ಅವರ ಜೊತೆಯಲ್ಲಿರುತ್ತೇನೆ. ಅವರು ತೋರಿದ ಮಾರ್ಗದಲ್ಲಿ ನಡೆಯುತ್ತೇನೆ ಎಂದರು.
ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ನೇಂಕಾತಿ ಕುರಿತು ನನಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಯಡಿಯೂರಪ್ಪ ನೀಡುವ ಯಾವುದೇ ಜವಾಬ್ಧಾರಿಯನ್ನು ನಾನು ನಿಭಾಯಿಸಲು ಸಿದ್ಧನಿದ್ದೇನೆ. ಕಾರ್ಯಮಿತ್ತ ಹೊಳಲ್ಕೆರೆ ಕ್ಷೇತ್ರದ ಹಳ್ಳಿಯೊಂದಕ್ಕೆ ಹೋಗಿ ಬರುತ್ತಿದ್ದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನನಗೆ ದೂರವಾಣಿ ಕರೆ ಮಾಡಿ ನೇಮಕಾತಿ ವಿಚಾರ ತಿಳಿಸಿದರು. ಅದಕ್ಕೆ ಒಪ್ಪಿಗೆ ಸೂಚಿಸಿದ್ದೇನೆ. ಮುಂದಿನ ದಿನಗಳಲ್ಲಿ ನನಗೆ ಅವರು ಇನ್ನೂ ಹೆಚ್ಚಿನ ಜವಾಬ್ಧಾರಿ ನೀಡುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.