ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದುವರೆಯುವುದು ಸೂರ್ಯ-ಚಂದ್ರರಷ್ಟೇ ಸತ್ಯ. ಮುಂದಿನ 3 ವರ್ಷದ ಅವಧಿಗೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರ ಜಿಲ್ಲೆಯ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ. ಯಡಿಯೂರಪ್ಪ ಯಾವುದೇ ಕಾರಣಕ್ಕೂ ಏಕಾಂಗಿಯಾಗಿಲ್ಲ. ಬಿಎಸ್ವೈ ನಮ್ಮ ನಾಯಕರು. ಯಡಿಯೂರಪ್ಪ ವಿಚಾರದಲ್ಲಿ ಯಾರೋ ಊಹಾಪೋಹ ಹರಡುತ್ತಿದ್ದಾರಷ್ಟೇ. ಬಿಜೆಪಿ ಸರ್ಕಾರವು ಯಡಿಯೂರಪ್ಪ ಸಾರಥ್ಯದಲ್ಲೇ ಮುಂದಿನ 3 ವರ್ಷ ಪೂರ್ಣಗೊಳಿಸಲಿದೆ ಎಂದರು.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಆಗಲೀ, ಸಚಿವೆ ಶಶಿಕಲಾ ಜೊಲ್ಲೆಯವರಾಗಲೀ ದೆಹಲಿಗೆ ಭೇಟಿ ನೀಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ವೈಯಕ್ತಿಕ ಕೆಲಸಗಳಿಗೆಂದು ಹೋಗಿರಬಹುದು. ದೆಹಲಿಗೆ ಹೋದ ಮಾತ್ರಕ್ಕೆ ಅದಕ್ಕೆ ಸ್ಥಾನಮಾನ ಕೇಳಲೆಂದೇ ಹೋಗಿದ್ದಾರೆಂದು ಅರ್ಥವಲ್ಲ. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಸಚಿವ ಸ್ಥಾನ ಕೇಳುವುದು ತಪ್ಪು. ಸಚಿವ ಸ್ಥಾನವನ್ನು ನೀಡುವಂತೆ ನಾನು ಕೂಡ ಕೇಳಿಲ್ಲ. ಸಮಯ, ಸಂದರ್ಭ ಬಂದಾಗ ನಮ್ಮ ಪಕ್ಷದ ವರಿಷ್ಠರಿಗೆ ಮನವಿ ಮಾಡುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷ ಸ್ಥಾನವನ್ನು ನೀಡಿದ್ದರೂ ಕೆಲವರು ತಮಗೆ ಅಧ್ಯಕ್ಷ ಸ್ಥಾನ ಬೇಡವೆಂದು ಅದನ್ನು ವಾಪಾಸ್ಸು ನೀಡುವ ಮಾತುಗಳನ್ನಾಡುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲರನ್ನೂ ಸಮಾನವಾಗಿ ಕಾಣುವಂತಹ ನಾಯಕ. ಎಲ್ಲಾದರೂ ಲೋಪವಾಗಿದ್ದರೆ ಅದನ್ನು ಸರಿಪಡಿಸುತ್ತೇವೆ. ಮುಂದೆಯೂ ನಮ್ಮ ಪಕ್ಷವೇ ಅಧಿಕಾರಕ್ಕೂ ಬರುತ್ತದೆ ಎಂದು ಅವರು ನುಡಿದರು.