ಹೊಸ ದಿಗಂತ ವರದಿ, ದಾವಣಗೆರೆ:
ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಸಿದ್ದರಾಮಯ್ಯ ಒಂದು ರೀತಿ ಹುಚ್ಚನಂತಾಗಿದ್ದು, ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹರಿಹಾಯ್ದಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಮುಖ್ಯಮಂತ್ರಿಯಾಗಲು ಕುರುಬರ ಎಸ್ಟಿ ಹೋರಾಟ ಎಂಬುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ಒಬ್ಬ ಮುಖ್ಯಮಂತ್ರಿ ಆಗಿದ್ದವರು ಈ ರೀತಿಯ ನೀಚತನಕ್ಕೆ ಇಳಿದು ಮಾತನಾಡಬಾರದು. ನಾವು ಮುಖ್ಯಮಂತ್ರಿ ಆಗುವುದನ್ನು ಬಿಜೆಪಿ ಪಕ್ಷ ನಿರ್ಧರಿಸುತ್ತದೆ. ನಮ್ಮ ಪಕ್ಷದಲ್ಲಿ ನಾನೇ ಮುಂದಿನ ಮುಖ್ಯಮಂತ್ರಿ ಎಂಬುದಾಗಿ ಹೇಳುವ ವ್ಯವಸ್ಥೆ ಇಲ್ಲ ಎಂದು ತಿರುಗೇಟು ನೀಡಿದರು.
ಸಿದ್ದರಾಮಯ್ಯ ಮೇಲೆ ಕಾಂಗ್ರೆಸ್ಸಿನವರಿಗೆ ನಿಯಂತ್ರಣ ಇಲ್ಲ. ಹೀಗಾಗಿಯೇ ತಾನೇ ಮುಂದಿನ ಸಿಎಂ ಅಂತಾ ಸಿದ್ದರಾಮಯ್ಯ ಘೋಷಿಸಿಕೊಂಡಿದ್ದಾರೆ. ಸಧ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯಗೆ ಕಾಂಗ್ರೆಸ್ಸಿನಲ್ಲಿ ಯಾರೂ ಕಂಟ್ರೋಲ್ ಮಾಡುತ್ತಿಲ್ಲ. ಒಂದು ವೇಳೆ
ಇದು ಸುಳ್ಳಾಗಿದ್ದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸ್ಪಷ್ಟಪಡಿಸಲಿ.
ತಾಕತ್ತಿದ್ದರೆ ತಾನೇ ಮುಂದಿನ ಸಿಎಂ ಎಂಬುದಾಗಿ ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯಗೆ ಡಿ.ಕೆ.ಶಿವಕುಮಾರ ನೋಟೀಸ್ ಕೊಡಲಿ ಎಂದು ಅವರು ಸವಾಲು ಹಾಕಿದರು.
ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿಗೆ ಒತ್ತಾಯಿಸಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಪಾದಯಾತ್ರೆ ಕೈಗೊಂಡಿದ್ದಾರೆ ಹೊರತು ನಾನಲ್ಲ. ಶ್ರೀಗಳ ಹೋರಾಟಕ್ಕೆ ನಾನು ಬೆಂಬಲ ನೀಡುತ್ತಿದ್ದೇನಷ್ಟೇ. ಸಮಾಜದ ಬಗ್ಗೆ ಸಿದ್ದರಾಮಯ್ಯಗೆ
ಕನಿಷ್ಟ ಕಾಳಜಿಯಾದರೂ ಇದ್ದರೆ ಕಾಗಿನೆಲೆ ಶ್ರೀಗಳೊಂದಿಗೆ ಕನಿಷ್ಟ ಅರ್ಧ ಕಿಲೋಮೀಟರ್ ಆದರೂ ಹೆಜ್ಜೆ ಹಾಕಲಿ ಅವರು ಕಿವಿಮಾತು ಹೇಳಿದರು.
ರಾಜ್ಯದಲ್ಲಿ ವಿಜಯಪುರ ಶಾಸಕ ಬಸವನಗೌಡ ಯತ್ನಾಳ್, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಮಸ್ಯೆ ಮುಗಿದರೆ ಮಾಧ್ಯಮಗಳಿಗೆ ಕೆಲಸ ಇರುವುದಿಲ್ಲ.
ಯತ್ನಾಳ್-ರೇಣುಕಾಚಾರ್ಯ ಉಪಟಳವಿಲ್ಲದಿದ್ದರೆ ಮಾಧ್ಯಮದವರಿಗೇ ಕೆಲಸ ಇರಲ್ಲ. ಇಬ್ಬರ ಸಮಸ್ಯೆ ಬಗ್ಗೆ ನಮ್ಮ ಪಕ್ಷದ ವರಿಷ್ಠರು ಗಮನ ಹರಿಸಿದ್ದಾರೆ. ಶೀಘ್ರವೇ ಎಲ್ಲ ಸಮಸ್ಯೆಯೂ ಪರಿಹಾರಗೊಳ್ಳಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.