ಹೊಸ ದಿಗಂತ ಆನ್ ಲೈನ್ ಡೆಸ್ಕ್:
ನಿವಾರ್ ಚಂಡಮಾರುತ ಅಬ್ಬರ ಮತ್ತೆ ರಾಜ್ಯದಲ್ಲಿ ಮುಂದುವರೆಯಲಿದೆ. ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಗಳಿದ್ದು, ಡಿಸೆಂಬರ್ ಮೊದಲ ವಾರ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಕಳೆದ ಮೂರ್ನಾಲ್ಕು ದಿನಗಳಿಂದಲೂ ಚಂಡಮಾರುತದ ಪರಿಣಾಮದಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಹಗುರ ಮತ್ತು ಸಾಧಾರಣ ಪ್ರಮಾಣದ ಮಳೆಯಾಗಿತ್ತು. ಇದೀಗ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ವಿ. ಎಸ್. ಪ್ರಕಾಶ್ ಈ ಕುರಿತು ಮಾಹಿತಿ ನೀಡಿದ್ದು ,ಬಂಗಾಳಕೊಲ್ಲಿಯಲ್ಲಿ ದುರ್ಬಲಗೊಂಡಿದ್ದ ನಿವಾರ್ ಚಂಡಮಾರುತ ಮತ್ತೆ ಬಲಗೊಳ್ಳಲಿದೆ. ಡಿಸೆಂಬರ್ 1 ರಿಂದ 4ರವರೆಗೆ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಭೂ ಸ್ಪರ್ಶವಾದ ನಂತರ ಚಂಡಮಾರುತ ದುರ್ಬಲಗೊಳ್ಳಬೇಕಿತ್ತು. ಆದರೆ ಅದು ಮತ್ತೆ ಸಮುದ್ರಕ್ಕೆ ಹೋಗಿರುವುದರಿಂದ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಮತ್ತೆ ಮಳೆಯಾಗುವ ನಿರೀಕ್ಷೆ ಮಾಡಲಾಗಿದೆ.