ಹೊಸ ದಿಗಂತ ವರದಿ, ಉಡುಪಿ:
ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಇರುವ ಒಬ್ಬ ಮತದಾರ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚುನಾವಣಾ ಅಭ್ಯರ್ಥಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಅವರು ಮುದ್ರಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ತೆರೆದ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ಆರೋಗ್ಯ ಇಲಾಖೆಯಿಂದ ಮತ ಚಲಾಯಿಸಲು ಅಗತ್ಯ ವ್ಯವಸ್ಥೆ ಮಾಡಲಾಗಿತ್ತು. ಹೆಬ್ರಿ ತಾಲೂಕಿನಲ್ಲಿ ಇನ್ನೊಬ್ಬರಿಗೆ ಕೋವಿಡ್ ಪಾಸಿಟಿವ್ ಇದ್ದರೂ ಅವರು ತಮ್ಮ ಹಕ್ಕನ್ನು ಚಲಾಯಿಸಲು ಸಮ್ಮತಿಸಲಿಲ್ಲ.
ಉಡುಪಿ ತಾಲೂಕಿನಲ್ಲಿ 5ಮಂದಿಗೆ ಕೋವಿಡ್ ಪಾಸಿಟಿವ್ ಇದ್ದು, ಇವರಲ್ಲಿ ಇಬ್ಬರು ಆಸ್ಪತ್ರೆಯಲ್ಲಿದ್ದಾರೆ. ಉಳಿದ ಮೂವರು ಮನೆಗಳಲ್ಲಿದ್ದರೂ ಅವರು 70ವರ್ಷ ವಯಸ್ಸು ಮೇಲ್ಪಟ್ಟವರಾಗಿದ್ದಾರೆ. ಆದ್ದರಿಂದ ಅವರು ಯಾರೂ ಮತ ಚಲಾಯಿಸಲು ಸಮ್ಮತಿಸಲಿಲ್ಲ. ಬ್ರಹ್ಮಾವರ ತಾಲೂಕಿನಲ್ಲಿಯೂ ಇಬ್ಬರು ಪಾಸಿಟಿವ್ ಮತದಾರರಿದ್ದು, ಅವರು ಯಾರೂ ಮತ ಚಲಾಯಿಸಲು ಉತ್ಸಾಹ ತೋರಲಿಲ್ಲ ಎಂದು ಆಯಾ ತಾಲೂಕು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.