Wednesday, July 6, 2022

Latest Posts

ಮುರುಘಾಮಠದಲ್ಲಿ ನಡೆಯಿತು 31ನೇ ವರ್ಷದ ಸಾಮೂಹಿಕ ಕಲ್ಯಾಣ ಮಹೋತ್ಸವ

ಹೊಸ ದಿಗಂತ ವರದಿ, ಚಿತ್ರದುರ್ಗ:

ಉಸಿರಾಟ ಜೀವಂತಿಕೆ ತೋರಿಸುತ್ತದೆ. ಮಾನವ ಉಸಿರಾಟದಂತೆ ಧರ್ಮ, ಮೌಲ್ಯ, ಸಿದ್ಧಾಂತಗಳನ್ನು ಸದಾ ತನ್ನೊಳಗಿರಿಸಿಕೊಳ್ಳಬೇಕು. ಅಂಥ ವ್ಯಕ್ತಿ ನಡೆದಾಡುವ ದೇವಾಲಯವಾಗುತ್ತಾನೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.
ಇಲ್ಲಿನ ಮುರುಘಾಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 31ನೇ ವರ್ಷದ ಒಂದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂತಃಸಾಕ್ಷಿ ಮತ್ತು ಅಂತಃಪ್ರಜ್ಞೆ ಜೊತೆಯಲ್ಲಿ ಸಾಗಬೇಕು. ಬದುಕಿನಲ್ಲಿ ಹೊಂದಾಣಿಕೆ ಮತ್ತು ಸಾಮರಸ್ಯ ಬೇಕು. ಸಂಸಾರದಲ್ಲಿ ಸ್ವಾರಸ್ಯ ಉಂಟಾಗಬೇಕು. ದೇಹದಲ್ಲಿ ರಕ್ತ ಹರಿಯಲೇಬೇಕು. ರಕ್ತದಾನ ಶ್ರೇಷ್ಠವಾದುದು. ಎಲ್ಲರು ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಬೇಕು ಎಂದರು.
ಹೃಷಿಕೇಶದ ದಯಾನಂದಾಶ್ರಮದ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಮಾತನಾಡಿ, ನಮ್ಮ ಸಿದ್ಧಾಂತವನ್ನು ನಾವು ಆಚರಿಸಬೇಕು. ಮಾತನಾಡುವುದು ಸುಲಭ, ಆದರೆ ಆಚರಣೆಗೆ ತರುವುದು ಕಷ್ಟ. ಮದುವೆ ಅಂದರೆ ಪರಸ್ಪರ ಅರ್ಥ ಮಾಡಿಕೊಳ್ಳುವುದಾಗಿದೆ ಎಂದು ತಿಳಿಸಿದರು.
ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಮಾತನಾಡಿ, ಭಾರತ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ರಾಷ್ಟ್ರ. ಹಾಗಾಗಿ ನಮ್ಮ ಸಂಸ್ಕೃತಿಯನ್ನು ಇತರೆ ದೇಶಗಳು ಅನುಸರಿಸುತ್ತಿವೆ. ಆದರೆ ಇಂದು ನಮ್ಮೊಳಗೆ ಪರಸ್ಪರ ಅರಿತುಕೊಳ್ಳುವ ಮನೋಭಾವನೆಯೇ ಇಲ್ಲವಾಗಿದೆ. ಪ್ರತಿಷ್ಠೆಗಳನ್ನು ಬದಿಗೆ ಸರಿಸಿ ಮುಂದಿನ ಪೀಳಿಗೆಗೆ ಅವರ ಕರ್ತವ್ಯಗಳ ಕುರಿತು ಅರಿವು ಮೂಡಿಸಿ ಉತ್ತಮ ಸಂಸ್ಕಾರವನ್ನು ನೀಡುವ ಕಾರ್ಯ ಆಗಬೇಕು.
ದೇವರಾಜ ಅರಸ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ರಘು ಮಾತನಾಡಿ, ಇದೊಂದು ಗಿನ್ನಿಸ್ ದಾಖಲೆಗೆ ಹೋಗುವ ಕಾರ್ಯಕ್ರಮ. ನಮಗೆ ಬೇಕಿರುವುದು ವೈಭವದ ಬದುಕಲ್ಲ ನೈಜ ಬದುಕು. ಆಚಾರ ವಿಚಾರಗಳನ್ನು ಪಾಲಿಸಬೇಕು. ನಾವು ನಮ್ಮನ್ನು ಮರೆಯುವ ಸಂದರ್ಭ ಬರಬಾರದು. ನಮ್ಮ ಬಾಂಧವ್ಯಗಳು ಗಟ್ಟಿಯಾಗಬೇಕು. ನಮ್ಮ ಸಂಸ್ಕೃತಿ ಮತ್ತೆ ಪ್ರತಿಷ್ಠಾಪಿಸಬೇಕಿದೆ. ಆದಷ್ಟು ಸರಳತೆಯ ಬದುಕು ನಮ್ಮದಾಗಬೇಕು ಎಂದು ಹೇಳಿದರು.
ಸತೀಶ್ ವಿ. ಮಾತನಾಡಿದರು. ಈ ಸಂದರ್ಭದಲ್ಲಿ 2 ಜೋಡಿ ಅಂತರ್ಜಾತಿ ಸೇರಿದಂತೆ 17 ಜೋಡಿಗಳು ವಿವಾಹವಾದರು. ಛಲವಾದಿ ಗುರುಪೀಠದ ಶ್ರೀ ಬಸವನಾಗಿದೇವ ಸ್ವಾಮಿಗಳು, ನಿಪ್ಪಾಣಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಮಡಿವಾಳ ಮಾಚಿದೇವ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮಿಗಳು ಉಪಸ್ಥಿತರಿದ್ದರು.
ಸಾಮೂಹಿಕ ಕಲ್ಯಾಣ ಮಹೋತ್ಸವದ ಅಂಗವಾಗಿ ಸರ್ಕಾರಿ ಆಸ್ಪತ್ರೆ ವತಿಯಿಂದ ರಕ್ತದಾನ ಕಾರ್ಯಕ್ರಮ ನಡೆಯಿತು. ಜಮುರಾ ಕಲಾವಿದರು ಪ್ರಾರ್ಥಿಸಿದರು. ವೀರಭದ್ರಪ್ಪ ಸ್ವಾಗತಿಸಿದರು. ಜ್ಞಾನಮೂರ್ತಿ ನಿರೂಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss