ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಪ್ರಸಿದ್ಧ ಪ್ರವಾಸಿತಾಣ ಮುಳ್ಳಯ್ಯನ ಗಿರಿ ಪ್ರದೇಶದಲ್ಲಿ ವಿಶಿಷ್ಟವಾದ ಆರ್ಕಿಡ್ ಸಸ್ಯ(ಸೀತಾಳೆ ಹೋವಿನ ಪ್ರಬೇಧ) ವೊಂದನ್ನು ಪತ್ತೆ ಹಚ್ಚಿರುವುದಾಗಿ ಅರಣ್ಯ ಇಲಾಖೆಯ ವಾಹನ ಚಾಲಕರಾಗಿರುವ ಬಿ.ಮಂಜುನಾಥ್ ತಿಳಿಸಿದ್ದಾರೆ.
ಕೇರಳದ ವಯನಾಡುವಿನಲ್ಲಿ ಸಸ್ಯತಜ್ಞ ಡಾ.ಕೆ.ವಿ ಜಾರ್ಜ್ ಎಮರಿಟ್ ಅವರು ಮೊದಲ ಬಾರಿಗೆ ಈ ಪ್ರಬೇಧವನ್ನು ಪತ್ತೆ ಮಾಡಿದ್ದು, ಮುಳ್ಳಯ್ಯನ ಗಿರಿ ತಪ್ಪಲಿನಲ್ಲಿ ಇದನ್ನು ತಾವೇ ಮೊದಲು ಪತ್ತೆ ಮಾಡಿರುವುದಾಗಿ ಮಂಜುನಾಥ್ ತಿಳಿಸಿದ್ದಾರೆ.
ವೈಭಿಯ ಜಾತಿಗೆ ಸೇರಿದ ಈ ಸಸ್ಯ ತೇವಾಂಶ ಭರಿತ ಶೋಲಾ ಕಾಡಿನಲ್ಲಿ ಹುಟ್ಟುತ್ತದೆ. ಡಿಸೆಂಬರ್ ನಲ್ಲಿ ಚಿಗುರಿ, ಫೆಬ್ರವರಿಯಲ್ಲಿ ಹೂವು ಬಿಡುತ್ತದೆ ಎಂದು ಅವರು ಹೇಳಿದ್ದಾರೆ.
ಇಲ್ಲಿ ಸೆರೆ ಹಿಡಿದ ಆರ್ಕಿಡ್ ಸಸ್ಯದ ಭಾವಚಿತ್ರಗಳನ್ನು ಹಲವು ಮಂದಿ ಐಎಫ್ಎಸ್ ಅಧಿಕಾರಿಗಳು ಹಾಗೂ ತೋಟಗಾರಿಕೆ ಕಾಲೇಜಿನ
ಡೀನ್ ಳೊಂದಿಗೆ ಹಂಚಿಕೊಂಡಿದ್ದು ಅವರೆಲ್ಲರೂ ಇದನ್ನು ಅಪರೂಪದ ವೈಭಿಯಾ ಜಾತಿಗೆ ಸೇರಿದ ಸಸ್ಯ ಎನ್ನುವದನ್ನು ದೃಢಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ವಾಹನ ಚಾಲಕರಾಗಿರುವ ಮಂಜುನಾಥ್ ಅವರು ಸಸ್ಯಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಈ ಹಿಂದೆ ಇಲ್ಲಿ ಕರ್ತವ್ಯ ನಿರ್ವಹಿಸಿದ್ದ ಡಿಎಫ್ಓ ಪ್ರಸನ್ನ ಕುಮಾರ್ ಅವರ ಮಾರ್ಗದರ್ಶನದಲ್ಲಿ ಆರ್ಕಿಡ್ ಸಸಸ್ಯಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ.