ಬಂಟ್ವಾಳ: ಜಿಲ್ಲೆಯ ಜೀವ ನದಿ ನೇತ್ರಾವತಿ ಶನಿವಾರ ಬೆಳಗ್ಗಿನಿಂದ ಅಪಾಯದ ಮಟ್ದವನ್ನು ಮೀರಿ ಹರಿಯುತ್ತಿದ್ದಾಳೆ. ನೇತ್ರಾವತಿಯ ಅಪಾಯದ ಮಟ್ಟ 9 ಮೀ.ಆಗಿದ್ದು, ಈಗಾಗಲೇ ಈ ಅಪಾಯದಮಟ್ಟವನ್ನು ಮೀರಿ ನೀರು ಹರಿಯುತ್ತಿರುವುದರಿಂದ ನದಿತೀರದ ಪ್ರದೇಶಗಳು ಜಲಾವೃತಗೊಂಡಿದೆ.
ಕಳೆದ ಮೂರುದಿನಗಳಿಂದ ಗಾಳಿಯ ಜೊತೆ ಧಾರಾಕಾರವಾಗಿ ಜಡಿಮಳೆ ಸುರಿಯುತ್ತಿದ್ದು, ಬಂಟ್ವಾಳ ಸುತ್ತಮುತ್ತಲಿನ ತಗ್ಗುಪ್ರದೇಶಗಳಾದ ಜಕ್ರಿಬೆಟ್ಟು,ನಾವೂರು,ಬಡಗುಂಡಿ ಮೊದಲಾದೆಡೆ ರಸ್ತೆಗೆ ನೀರು ನುಗ್ಗಿದೆ,ಬಡ್ಡಕಟ್ಟೆ, ಪಾಣೆಮಂಗಳೂರಿನ ಕಂಚಿಕಾರ ಪೇಟೆ,ಬ್ರಹ್ಮರಕೊಟ್ಲು, ಫರಂಗಿಪೇಟೆ ಮೊದಲಾದ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ.
ಲಡ್ಕ ಮಿಲಿಟ್ರಿ ಮೈದಾನದಲ್ಲಿ ನೀರು ನುಗ್ಗಿದೆ ಪಾಣೆಮಂಗಳೂರು-ಅಲಡ್ಕ ರಸ್ತೆಯನ್ನು ನೀರು ಅವರಿಸಿದರಿಂದ ವಾಹನಸಂಚಾರವನ್ನು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.ಹಾಗೆಯೇ ಇಲ್ಲಿನ ಮನೆಮಂದಿಯನ್ನು ಸುರಕ್ಷಿತಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಗ್ರಾಮೀಣಭಾಗದಲ್ಲಿ ಹಲವಾರು ಕೃಷಿಭೂಮಿಗೆ ನೀರು ನುಗ್ಗಿ ಕೃಷಿಹಾನಿಯಾದ ಬಗ್ಗೆ ವರದಿಯಾಗಿದೆ. ಯಾವುದೇ ಅಪಾಯವನ್ನು ಎದುರಿಸಲು ತಾಲೂಕಾಡಳಿತ ಸನ್ನದ್ದವಾಗಿದ್ದು,ಮುಂಜಾಗೃತಕ್ರಮವಾಗಿ ತಾಲೂಕು ಕಚೇರಿಯಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದೆ.
ಶಾಸಕರಿಂದ ಸೂಚನೆ: ನದಿ ತೀರದ ಪ್ರದೇಶಗಳು ಜಲಾವೃತಗೊಂಡಿದ್ದು ನೀರಿನ ಮಟ್ಟವು ಹೆಚ್ಚಳವಾಗುತ್ತಿದೆ. ಈಗಾಗಲೇ ಜಿಲ್ಲಾದ್ಯಂತ ರೆಡ್ ಎಲರ್ಟ್ ಘೋಷಣೆ ಯಾಗಿದ್ದು ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಶಾಸಕ ರಾಜೇಶ್ ನಾಯ್ಕ್ ರವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಂಟ್ವಾಳ ದಲ್ಲಿ ನೇತ್ರಾವತಿ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಗ್ರಾಮಾಂತರ ಭಾಗದಲ್ಲಿ ಕೃಷಿ ಭೂಮಿಗೆ ನೀರು ನುಗ್ಗಿ ಹಾನಿಯಾದ ಬಗ್ಗೆ ದೂರುಗಳು ಬರುತ್ತಿದ್ದು ಇಂತಹ ಪ್ರದೇಶಗಳಿಗೆ ಸ್ಥಳೀಯ ಅಧಿಕಾರಿಗಳು ತೆರಳಿ ಪರಿಸ್ಥಿತಿಯ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡುವಂತೆಯು ಕಂದಾಯ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.