ಹೊಸ ದಿಗಂತ ಆನ್ ಲೈನ್ ಡೆಸ್ಕ್ :
ಕೊರೋನಾ ವೈರಸ್ ಮೂಗಿನ ಮೂಲಕ ಮಿದುಳನ್ನು ಪ್ರವೇಶಿಸಬಲ್ಲದು. ತನ್ಮೂಲಕ ಶ್ವಾಸನಾಳ ಮತ್ತು ಪ್ರಧಾನ ನರಮಂಡಲ ವ್ಯವಸ್ಥೆಯನ್ನು ಇವು ಹಾಳುಗೆಡಹುತ್ತವೆ. ಪರಿಣಾಮ ಸಂತ್ರಸ್ತ ರೋಗಿ ವಾಸನೆ -ರುಚಿ ಗ್ರಹಿಸುವ ಶಕ್ತಿ ಕಳಕೊಳ್ಳುತ್ತಾನೆ. ತಲೆನೋವು, ಸುಸ್ತು , ವಾಕರಿಕೆ ಇತ್ಯಾದಿ ತೊಂದರೆ ಕಾಣಿಸಿಕೊಳ್ಳುತ್ತವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಮಿದುಳು ಮತ್ತು ನರಮಂಡಲದ ದ್ರವಭಾಗದಲ್ಲಿ ಕೊರೋನಾ ವೈರಸ್ಗಳು ಪತ್ತೆಯಾಗಿದ್ದರೂ, ಇವು ಇಲ್ಲಿಗೆ ಹೇಗೆ ತಲುಪುತ್ತವೆ ಎಂಬುದು ಇದುವರೆಗೆ ಪತ್ತೆಯಾಗಿರಲಿಲ್ಲ.
ಚಾರಿಟಿ ಯುನಿವರ್ಸಿಟಿ ಬರ್ಲಿನ್ ಇಲ್ಲಿನ ಸಂಶೋಧಕರು, ಕೊರೋನಾದಿಂದ ಮೃತಪಟ್ಟ ೨೨ ಪುರುಷರು ಮತ್ತು ಮಹಿಳೆಯರ ಮೂಗನ್ನು ಸಂಪರ್ಕಿಸುವ ಗಂಟಲ ಮೇಲ್ಭಾಗ ಮತ್ತು ಮಿದುಳಿನ ಅಧ್ಯಯನ ನಡೆಸಿದಾಗ, ವೈರಸ್ಗಳ ವಂಶವಾಹಿ ಸಾರವಾದ ಸಾರ್ಸ್-ಕೋವಿಡ್ -೨ ಆರ್ಎನ್ಎ ವೈರಸ್ಗಳು ಮೂಗಿನ ಹೊಳ್ಳೆಗಳ ಮೂಲಕ ಮಿದುಳಿಗೆ ನುಗ್ಗಿರುವುದು ಬೆಳಕಿಗೆ ಬಂದಿದೆ. ಮೃತಪಟ್ಟವರ ಪ್ರಾಯ ೭೧ರ ಅಂದಾಜು ಮತ್ತು ಈ ರೋಗಿಗಳು ಕೋವಿಡ್ ಲಕ್ಷಣ ಗೋಚರಿಸಿದ ನಂತರ ೩೧ ದಿನಗಳಲ್ಲಿ ಮೃತಪಟ್ಟಿದ್ದಾರೆಂದು ಅಧ್ಯಯನ ಬೊಟ್ಟು ಮಾಡಿದೆ.
ಕಾಯಿಲೆಯ ಭಾದೆ ಅವ ಕಡಿಮೆ ಇರುವ ರೋಗಿಗಳಲ್ಲಿ ಸಾರ್ಸ್ ಕೋವಿಡ್-೨ ಆರ್ಎನ್ಎ ಪ್ರಮಾಣ ಅತ್ಯಕವಿರುತ್ತದೆಂದು ಸಂಶೋಧಕರು ಗಮನ ಸೆಳೆದಿದ್ದಾರೆ.