ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿರುವ ಭಾರತ ಬುಧವಾರ ನಡೆದ ಮೂರನೇ ಏಕದಿನ ಪಂದ್ಯವನ್ನು 13 ರನ್ಗಳಿಂದ ಗೆದ್ದು ಸರಣಿ ವೈಟ್ವಾಶ್ ಆಗುವುದನ್ನು ತಪ್ಪಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ, ನಾಯಕ ವಿರಾಟ್ ಕೊಹ್ಲಿ (63), ಹಾರ್ದಿಕ್ ಪಾಂಡ್ಯ (ಔಟಾಗದೇ 92) ಹಾಗೂ ರವೀಂದ್ರ ಜಡೇಜಾ (ಔಟಾಗದೇ 66) ಅವರ ಭರ್ಜರಿ ಆಟದ ನೆರವಿನಿಂದ 5 ವಿಕೆಟ್ಗೆ 302 ರನ್ ಗಳಿಸಿದರೆ, ಆಸ್ಟ್ರೇಲಿಯಾ ಮೂರು ಬಾಲ್ ಇರುವಂತೆಯೇ 289 ರನ್ ಗಳಿಸಿ ಆಲೌಟ್ ಆಯಿತು.
ಭಾರತದ ನೂತನ ಉಪನಾಯಕ ಕನ್ನಡಿಗ ಕೆ.ಎಲ್. ರಾಹುಲ್ ಬ್ಯಾಟ್ ಈ ಪಂದ್ಯದಲ್ಲೂ ಮಾತನಾಡಲಿಲ್ಲ. ಶ್ರೇಯಸ್ ಅಯ್ಯರ್ ಕೂಡಾ ರನ್ ಗಳಿಸಲು ವಿಫಲರಾದರು.
ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಗೆ ಈ ಬಾರಿ ಹಿಂದಿನ ಪಂದ್ಯಗಳಂತೆ ಭರ್ಜರಿ ಆರಂಭ ಸಿಗಲಿಲ್ಲ. ವಾರ್ನರ್ ಇಲ್ಲದ ಕಾರಣ ಆರಂಭಿಕ ಸ್ಥಾನಕ್ಕೆ ಭಡ್ತಿ ಪಡೆದ ಲಬೂಶೇನ್ ನಿರಾಶೆ ಮೂಡಿಸಿದರು. ಅವರ ಗಳಿಕೆ ಕೇವಲ 7. ಹಿಂದಿನ ಪಂದ್ಯಗಳಲ್ಲಿ ಭರ್ಜರಿ ಆಟವಾಡಿದ್ದ ಸ್ಮಿತ್ ಆಟ ಇಲ್ಲಿ ಏಳೇ ರನ್ನಿಗೆ ಮುಗಿಯಿತು. ಆದರೆ ನಾಯಕ ಫಿಂಚ್ (75) ಹಾಗೂ ಮ್ಯಾಕ್ಸ್ವೆಲ್ (59 ಗೆಲುವಿಗಾಗಿ ಹೋರಾಡಿದರೂ ಈ ಬಾರಿ ಭಾರತೀಯ ಬೌಲರುಗಳು ಮೇಲುಗೈ ಸಾಧಿಸಿದರು. ಶಾರ್ದೂಲ್ ಠಾಕೂರ್ ಮೂರು ವಿಕೆಟ್ ಪಡೆದರೆ, ಬೂಮ್ರಾ ಹಾಗೂ ನಟರಾಜನ್ ತಲಾ 2 ವಿಕೆಟ್ ಪಡೆದರು. ಕುಲ್ದೀಪ್ ಮತ್ತು ಜಡೇಜಾ ತಲಾ ಒಂದು ವಿಕೆಟ್ ಪಡೆದರು.