Sunday, July 3, 2022

Latest Posts

ಮೂರು ದಶಕಗಳಿಂದ ಕತ್ತಲಲ್ಲಿದ್ದ ಕುಟುಂಬಕ್ಕೆ ಬೆಳಕಾದ ನವ ದಂಪತಿ!

ದಿಗಂತ ವರದಿ, ಉಡುಪಿ
ಭಾನುವಾರ ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದ ಉಡುಪಿ ಕನ್ನರ್ಪಾಡಿ ನಿವಾಸಿ ಶರಣ್ ಶೆಟ್ಟಿ ಮತ್ತು ನವ್ಯಾ ಶೆಟ್ಟಿ ಜೋಡಿಯು ಕಳೆದ ಮೂರು ದಶಕಗಳಿಂದ ಕತ್ತಲಲ್ಲಿದ್ದ ಕುಟುಂಬಕ್ಕೆ ಬೆಳಕಾಗಿದೆ!
ಚಿಮಣಿ ದೀಪದಲ್ಲಿ ಜೀವನ
ಪೆರಂಪಳ್ಳಿ ಸಮೀಪದ ದಲಿತ ಸಮುದಾಯದ ಲೀಲಾ ಅವರ ಮನೆಗೆ ಕಳೆದ ೩೦ ವರ್ಷಗಳಿಂದ ವಿದ್ಯುತ್ ಸಂಪರ್ಕವಿರಲಿಲ್ಲ. ಚಿಮಣಿ ದೀಪದಲ್ಲಿ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಎಂಟು ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಸೋಲಾರ್ ದೀಪ ಒದಗಿಸಲಾಗಿತ್ತು. ಪಕ್ಕದಲ್ಲಿ ಮಗನ ಮನೆಯೂ ಇದ್ದು, ಎರಡೂ ಮನೆಗಳಿಗೆ ವಿದ್ಯುತ್ ಸಂಪರ್ಕವಿರಲಿಲ್ಲ. ಇದನ್ನು ಮನಗಂಡ ಕಡಿಯಾಳಿಯ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮತ್ತು ಆಸರೆ ಚಾರಿಟೇಬಲ್ ಟ್ರಸ್ಟ್ ಮನೆಗೆ ವಿದ್ಯುತ್ ಸಂಪರ್ಕ ಒದಗಿಸಿದೆ.  ಇದಕ್ಕೆ ತಗುಲಿದ 30 ಸಾವಿರ ರೂ. ವೆಚ್ಚವನ್ನು ನವದಂಪತಿ ಭರಿಸಿದೆ.
ನೂತನ ವಿದ್ಯುತ್ ಸಂಪರ್ಕ
ಭಾನುವಾರ ಉಡುಪಿ ಬಾಷೆಲ್ ಮಿಷನ್ ಹಾಲಿನಲ್ಲಿ ತಮ್ಮ ಮದುವೆ ಸಂಪ್ರದಾಯ ಮುಗಿದ ನಂತರ ನೇರವಾಗಿ  ಲೀಲಾ ಅವರ ಮನೆಗೆ ಆಗಮಿಸಿದ ಶರಣ್ ಶೆಟ್ಟಿ ಮತ್ತು ನವ್ಯಾ ಶೆಟ್ಟಿ ನೂತನ ವಿದ್ಯುತ್ ಸಂಪರ್ಕವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಸರೆ ಚಾರಿಟೇಬಲ್ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ಕೋಶಾಧಿಕಾರಿ ಸತೀಶ್ ಕೆ. ಕುಲಾಲ್, ಚೇತನ್ ಕುಮಾರ್, ಕನ್ನರ್ಪಾಡಿ, ಅನಿಲ್ ಶೇರಿಗಾರ್, ಓವಿನ್, ಅಶ್ವಿನ್ ಶೆಟ್ಟಿ, ಸ್ಥಳೀಯರಾದ ಅರುಣಾ ಎಸ್. ಪೂಜಾರಿ, ಪ್ರಶಾಂತ್ ಪೆರಂಪಳ್ಳಿ, ಡೆನ್ನಿಸ್ ಪ್ರಸನ್ನ, ಆಕಾಶ್ ಪೂಜಾರಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯಶೋದಾ ಮತ್ತು ನವದಂಪತಿಯ ಕುಟುಂಬಸ್ಥರು ಉಪಸ್ಥಿತರಿದ್ದರು.
ಹುಟ್ಟು ಹಬ್ಬದಂದು ಮನೆ ಬೆಳಗಿಸಿ…
ಉಡುಪಿ ನಗರದವನ್ನು ಶೇ. 100 ರಷ್ಟು ವಿದ್ಯುತ್ ಸಂಪರ್ಕ ಹೊಂದುವಂತೆ ಮಾಡಲು ಕಡಿಯಾಳಿಯ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪಣ ತೊಟ್ಟಿದೆ. ಇದಕ್ಕಾಗಿ ಒಂದು ಯೋಜನೆಯನ್ನು ರೂಪಿಸಿದ್ದಾರೆ. ಉಡುಪಿ ನಿವಾಸಿಗಳು ತಮ್ಮ ಹುಟ್ಟು ಹಬ್ಬವನ್ನು ಬಡವರ ಮನೆಗಳಿಗೆ ಬೆಳಕು ನೀಡುವ ಮೂಲಕ ಆಚರಿಸಬಹುದು. ಮನೆಯೊಂದಕ್ಕೆ ವಿದ್ಯುತ್ ಸಂಪರ್ಕಕ್ಕೆ ೩೦ಸಾವಿರ ರೂ. ವೆಚ್ಚವಾಗುತ್ತದೆ. ಆದರೆ ೨೦ ಸಾವಿರ ರೂ. ನೀಡಿದರೆ ಮಕ್ಕಳ ಕೈಯಿಂದ ಆ ಮನೆಯ ದೀಪ ಬೆಳಗಿಸಿ, ಸಂಭ್ರಮವನ್ನು ಇಮ್ಮಡಿಗೊಳಿಸಬಹುದು.
ರಾಘವೇಂದ್ರ ಕಿಣಿ, ಪ್ರಧಾನ ಕಾರ್ಯದರ್ಶಿ, ಕಡಿಯಾಳಿ ಆಸರೆ ಚಾರಿಟೇಬಲ್ ಟ್ರಸ್ಟ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss