Monday, July 4, 2022

Latest Posts

ಮೂಲೆ ಗುಂಪಾಗುತ್ತಿದೆ ಕೊಡಗಿನ ಏಕೈಕ ಕೈಮಗ್ಗ ಕೇಂದ್ರ: ರಾಟೆಯ ಸದ್ದಡಗುವ ಮುನ್ನ ಆಗಬೇಕಿದೆ ಕಾಯಕಲ್ಪ

ಕುಶಾಲನಗರ: ಕೊಡಗಿನ ಗಡಿ ಭಾಗವಾದ ಶಿರಂಗಾಲ ಗ್ರಾಮದಲ್ಲಿ 1981ರಲ್ಲಿ ಪ್ರಾರಂಭಗೊಂಡ ಕಾವೇರಿ ಸಮೂಹ ನೆಯ್ಗೆ ಕೇಂದ್ರ ಇದೀಗ ಅಭಿವೃದ್ಧಿ ಕಾಣದೆ ಮೂಲೆ ಗುಂಪಾಗಿದೆ.
ಕಾವೇರಿ ಹ್ಯಾಂಡ್ ಲೂಮ್‌ನ ಶಾಖೆಯಾಗಿ ಜಿಲ್ಲೆಯ ಏಕೈಕ ಕೈಮಗ್ಗ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಈ ಕೇಂದ್ರದಲ್ಲಿ ಆರಂಭದಲ್ಲಿ ಶಿರಂಗಾಲದ ನೂರಾರು ಮಂದಿ ನೆಯ್ಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕಾಲ ಕ್ರಮೇಣ ಜನತೆ ಆಧುನಿಕತೆಗೆ ಮಾರು ಹೋಗುತ್ತಿದ್ದರೂ, ಈ ಕೇಂದ್ರಕ್ಕೆ ಅಗತ್ಯವಾಗಿದ್ದ ಹೊಸ ತಂತ್ರಜ್ಞಾನದ ವಿದ್ಯುತ್ ನೆಯ್ಗೆ ಮಗ್ಗಗಳನ್ನು ಅಳವಡಿಸದಿರುವುದರಿಂದ ಇದೀಗ ಕೇವಲ 15 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ.
ಈ ಕೇಂದ್ರದಲ್ಲಿ ನೆಯ್ಗೆ ಮಾಡಲು ಬೇಕಾಗುವ ಕಚ್ಚಾ ವಸ್ತುಗಳನ್ನು ಅಧಿಕಾರಿಗಳು ಸಮರ್ಪಕವಾಗಿ ನೀಡುತ್ತಿದ್ದಾರೆ. ಸಿದ್ಧವಾದ ಬೆಡ್ ಶೀಟ್ ಮತ್ತು ಟವಲ್‌ಗಳನು ಇಲಾಖೆಯು ಮಾರುಕಟ್ಟೆಗೆ ಸಾಗಿಸಿದರೂ, ಸರಿಯಾದ ಬೆಲೆ ಸಿಗದೆ ಕೈಮಗ್ಗದಲ್ಲಿ ನೆಯ್ಗೆ ಮಾಡುವ ನೇಕಾರರಿಗೆ ಅವರ ದುಡಿಮೆಗೆ ತಕ್ಕಂತೆ ಹಣ ದೊರಕುತ್ತಿಲ್ಲ ಎಂದು ನೆಯ್ಗೆಯಲ್ಲಿ ತೊಡಗಿರುವ ಮಹಿಳೆಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ನೆಯ್ಗೆ ಕೇಂದ್ರದ ಕಟ್ಟಡ ಈಗಾಗಲೇ ಬೀಳುವ ಹಂತ ತಲಪಿದ್ದು ಅಲ್ಲಿ ಕೆಲಸ ಮಾಡುವವರು ಕೂಡ ಜೀವ ಭಯದಲ್ಲೇ ದುಡಿಯುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ಸ್ವ ಉದ್ಯೋಗ ಅವಲಂಬಿಸಲು ಹಾಗೂ ಕಾರ್ಯೋನ್ಮುಖರಾಗಲು ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದರೂ ಅದರ ಪ್ರಯೋಜನ ಮಾತ್ರ ಯುವಜನರಿಗೆ ತಲುಪುತ್ತಿಲ್ಲ.
ಶಿರಂಗಾಲ ಗ್ರಾಮದಲ್ಲಿ ನೂರಾರು ಮಂದಿ ವಿದ್ಯಾವಂತ ನಿರುದ್ಯೋಗಿ ಯುವಕರಿದ್ದು, ತಮ್ಮ ಬದುಕನ್ನು ಕಟ್ಟಿಕೊಳ್ಳಲು ಈ ನೇಯ್ಗೆ ಕೇಂದ್ರ ಅನುಕೂಲ ವಾಗಿತ್ತು. ಆದರೆ ಇದೀಗ ಈ ಬಟ್ಟೆ ಉತ್ಪಾದನಾ ಕೇಂದ್ರ ಮೂಲೆ ಗುಂಪಾಗಿ ಶಿಥಿಲಾವಸ್ಥೆಗೆ ತಲುಪಿದೆ.
ಜಿಲ್ಲೆಯ ಏಕೈಕ ಕೇಂದ್ರವಾಗಿದ್ದ ಈ ನೇಯ್ಗೆ ಕೇಂದ್ರವು ಮಡಿಕೇರಿ ಮತ್ತು ಕುಶಾಲನಗರದಲ್ಲಿ ಖಾದಿ ವಸ್ತು ಮಾರಾಟ ಕೇಂದ್ರಗಳನ್ನೂ ಹೊಂದಿತ್ತು. ಆದರೆ ಇದೀಗ ಎರಡೂ ಕೇಂದ್ರಗಳನ್ನು ಮುಚ್ಚಲಾಗಿದೆ.
ಇಲಾಖೆಯ ಅಧಿಕಾರಿಗಳು ಗ್ರಾಮೀಣ ಪ್ರದೇಶದ ಈ ನೆಯ್ಗೆ ಕೇಂದ್ರವನ್ನು ಪುನಶ್ಚೇತನಗೊಳಿಸುವುದರೊಂದಿಗೆ ನೇಕಾರರಿಗೆ ಹೆಚ್ಚು ಸಂಬಳವನ್ನು ಸಮರ್ಪಕವಾಗಿ ನೀಡಿದಲ್ಲಿ, ಈ ವಿಭಾಗದ ಮತ್ತಷ್ಟು ಜನರು ಖಾದಿ ವಸ್ತುಗಳಾದ ಬೇಡ್‌ಶೀಟ್, ಟವಲ್ ಹಾಗೂ ಖಾದಿಗೆ ಸಂಬಂಧಿಸಿದ ಅನೇಕ ಗೃಹೋಪಯೋಗಿ ವಸ್ತುಗಳನ್ನು ತಯಾರಿಸಿ ರಾಜ್ಯದ ಮೂಲೆ ಮೂಲೆಗೆ ಸಾಗಿಸಲು ಅನುಕೂಲವಾಗಲಿದೆ ಎಂಬುದು ಅಲ್ಲಿನ ನೇಕಾರರ ಅಭಿಪ್ರಾಯವಾಗಿದೆ.
ಕಳೆದ 25 ವರ್ಷಗಳಿಂದ ನೇಕಾರರಾಗಿ ದುಡಿಯುತ್ತಿರುವ ಹಲವು ಕಾರ್ಮಿಕರು ಪತ್ರಿಕೆಯೊಂದಿಗೆ ಮಾತನಾಡಿ, ಈ ನೆಯ್ಗೆ ಘಟಕ ಸದೃಢವಾದ ಕಟ್ಟಡವನ್ನು ಹೊಂದಿಲ್ಲ. ಈ ಕಟ್ಟಡವನ್ನು ಆಧುನೀಕರಣಗೊಳಿಸಿ ಹೊಸದಾದ ವಿದ್ಯುತ್ ಕೈಮಗ್ಗದ ಉಪಕರಣಗಳನ್ನು ಅಳವಡಿಸಬೇಕಾಗುತ್ತದೆ. ಇಲಾಖೆಯು ಇಲ್ಲಿನ ವ್ಯವಸ್ಥೆಯನ್ನು ಸರಿದೂಗಿಸಲು ಹೋದಲ್ಲಿ ಈ ಘಟಕ ಅಭಿವೃದ್ಧಿಯತ್ತ ಸಾಗಲು ಯಾವುದೇ ಅಡ್ಡಿಯಿಲ್ಲ ಎಂದಿದ್ದಾರೆ.
ಆರು ವರ್ಷವದರೂ ಬಂದಿಲ್ಲ ಸಬ್ಸಿಡಿ
ಈಗಾಗಲೇ ನೆಯ್ಗೆ ತರಬೇತಿ ಪಡೆದಿರುವ 15 ಮಂದಿಗೆ ತಮ್ಮ ಜೀವನದ ಮಟ್ಟವನ್ನು ಸುಧಾರಿಸಿಕೊಳ್ಳಲು ಬ್ಯಾಂಕುಗಳ ಮೂಲಕ ವಿಶೇಷ ಸಾಲ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ ಅವರಿಗೆ ನೀಡಬೇಕಾದ ಸಬ್ಸಿಡಿ ಹಣ ಆರು ವರ್ಷ ಕಳೆದರೂ ಬಿಡುಗಡೆ ಆಗಿಲ್ಲ. ಬ್ಯಾಂಕ್‌ಗಳಿಗೆ ಬರುವ ಅಧಿಕಾರಿಗಳು ತಮ್ಮ ಹಣವನ್ನು ಕಟ್ಟುವಂತೆ ತಿಳಿಸುತ್ತಿದ್ದಾರೆ. ಆಗಿನ ಬ್ಯಾಂಕ್ ಅಧಿಕಾರಿಗಳು ಸಾಲವನ್ನು ನೆಯ್ಗೆ ಯೋಜನೆಯ ಅಡಿಯಲ್ಲಿ ನೀಡುವ ಬದಲು ವ್ಯಾಪಾರ ವ್ಯವಸ್ಥೆಗೆಂದು ನೀಡಿದ್ದು, ಇದರಿಂದಾಗಿ ತಾವು ಸಬ್ಸಿಡಿ ವಂಚಿತರಾಗಿದ್ದೇವೆ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಜಿಲ್ಲೆಯ ಪ್ರಮುಖ ನೆಯ್ಗೆ ಕೇಂದ್ರವಾಗಬೇಕಾಗಿದ್ದ, ಶಿರಂಗಾಲ ವ್ಯಾಪ್ತಿಯ ನೇಕಾರರಿಗೆ ಉತ್ತಮ ಬದುಕು ರೂಪಿಸಿಕೂಡಬೇಕಿದ್ದ ಕೈಮಗ್ಗ ಈ ಘಟಕ ಅಧುನೀಕರಣದ ಅಬ್ಬರ ಹಾಗೂ ಸರಕಾರದ ನಿರ್ಲಕ್ಷಕ್ಕೊಳಗಾಗಿ ದುಸ್ಥಿತಿಯತ್ತ ಸಾಗುತ್ತಿದೆ.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶಿ ಉತ್ಪನ್ನಗಳಿಗೆ ಒತ್ತು ನೀಡುವಂತೆ ದೇಶದ ಜನತೆಗೆ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಖಾದಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಈ ಕೈಮಗ್ಗ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದು ಕೊಡಗು ಜಿಲ್ಲಾ ನೇಕಾರ ಸಮುದಾಯ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಟಿ.ಕೆ. ಪಾಂಡುರಂಗ ಆಗ್ರಹಿಸಿದ್ದಾರೆ.
ರಾಜ್ಯ ಕೈಮಗ್ಗ ಇಲಾಖೆಯ ಆಯುಕ್ತರಾಗಿದ್ದ ಎಂ.ಆರ್.ರವಿ, ಪ್ರಧಾನ ವ್ಯವಸ್ಥಾಪಕ ಮುದಯ್ಯ, ಜಿಲ್ಲಾ ಮಟ್ಟದ ಅಧಿಕಾರಿ ಗುರುಸ್ವಾಮಿ ಅವರು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ತೆರಳಿದ್ದಾರೆ ಎಂದು ಕೇಂದ್ರದ ಅಧಿಕಾರಿ ಮೋಹನ್ ತಿಳಿಸಿದ್ದಾರೆ.
ಈ ಕೇಂದ್ರದ ಅಭಿವೃದ್ಧಿಗೆ ಈಗಾಗಲೇ 20ಲಕ್ಷ ರೂ. ವೆಚ್ಚದ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಕೆಯಾಗಿದೆ. ರಾಜ್ಯ ಮಟ್ಟದ ಅಧಿಕಾರಿಗಳ ಆದೇಶ ಮೇರೆಗೆ ಜಿಲ್ಲಾ ಭೂ ಸೇನಾ ನಿಗಮದ ವತಿಯಿಂದ ಘಟಕ ಸರ್ವೆ ಕಾರ್ಯವೂ ನಡೆದಿದೆ ಮುಂದಿನ ದಿನಗಳಲ್ಲಿ ಘಟಕದ ಅಭಿವೃದ್ಧಿ ಕಾರ್ಯ ನಡೆಯುವ ಭರವಸೆಯಿದೆ ಎಂದು ಶಿರಂಗಾಲ ಘಟಕದ ಅಧಿಕಾರಿ ಮೋಹನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss