ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು, ತನ್ನ ಜವಾಬ್ದಾರಿಯನ್ನು ಪೂರೈಸಿದ್ದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು, ಮೈಸೂರಿನಲ್ಲೂ ಆನೆಗಳನ್ನು ಲಾರಿಗೆ ಹತ್ತಿಸುವ ತನ್ನ ಕಾಯಕವನ್ನು ನಡೆಸಿದ. ಆತನಿಗೆ ಗೋಪಿ ಸಾಥ್ ನೀಡಿದ.
ದಸರಾದ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡು ದಣಿದಿದ್ದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಮತ್ತು ಗೋಪಿಗೆ ಮೈಸೂರಿನಲ್ಲೂ ಮತ್ತೆ ಕೆಲಸವನ್ನು ನೀಡಲಾಯಿತು. ಅದಕ್ಕಾಗಿ ಅವರನ್ನು ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಮೈಸೂರು ಮೃಗಾಲಯದಿಂದ ಹೊರಗೆ ಕಳುಹಿಸುತ್ತಿರುವ ತಾಯಿ ಮತ್ತು ಮರಿಯಾನೆಯನ್ನು ಶಿಫ್ಟ್ ಮಾಡುವ ಕಾರ್ಯಚರಣೆಗೆ ಅಭಿಮನ್ಯು ಮತ್ತು ಗೋಪಿಯನ್ನು ಬಳಸಿಕೊಳ್ಳಲಾಯಿತು. ಇಬ್ಬರೂ ಸೇರಿ ತಾಯಿ ಮತ್ತು ಮರಿಯಾನೆಯನ್ನು ಇಂದು ಬೆಳಿಗ್ಗೆ ಲಾರಿಗೆ ಹತ್ತಿಸಿದರು. ನಂತರ ಅಭಿಮನ್ಯು ಮತ್ತು ಗೋಪಿ ಮತ್ತೆ ಅಂಬಾ ವಿಲಾಸ ಅರಮನೆ ಆವರಣಕ್ಕೆ ಕರೆ ತರಲಾಯಿತು. ಕಾಡು ಪ್ರಾಣಿಗಳನ್ನು ಸೆರೆ ಹಿಡಿಯುವ ಮತ್ತು ಪಳಗಿಸುವ ಕೆಲಸಕ್ಕೆ ಅಭಿಮನ್ಯುವನ್ನು ಬಳಸಿಕೊಳ್ಳಲಾಗಿದೆ. ರಂಪ ಮಾಡುವ, ಭಯ, ಭೀತಿ ಹುಟ್ಟಿಸುವ ಆನೆಗಳನ್ನು, ಸೆರೆ ಹಿಡಿದು, ಅವುಗಳನ್ನು ಮಣಿಸುವಲ್ಲಿ ಅರಣ್ಯ ಇಲಾಖೆಗೆ ಅಭಿಮನ್ಯು ಟ್ರಬಲ್ ಶೂಟರ್ ಕಾರ್ಯ ನಿರ್ವಹಿಸುತ್ತಿದ್ದಾನೆ. ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ಹವಣೆ ಮಾಡುವುದೇ ಅಭಿಮನ್ಯುವಿನ ವಿಶೇಷವಾಗಿದೆ.
ರಿಲ್ಯಾಕ್ಸ್ ಮೂಡ್ನಲ್ಲಿ ಗಜಪಡೆ : ಕುಮ್ಕಿ ಆನೆಗಳಾದ ವಿಜಯ, ಕಾವೇರಿ ಮತ್ತು ವಿಕ್ರಮ ಆನೆಗಳು ಅರಮನೆ ಆವರಣದಲ್ಲಿ ರಿಲ್ಯಾಕ್ಸ್ ಮೂಡ್ ಗೆ ಜಾರಿದ್ದವು. ಇವುಗಳಿಗೆ ಮಾವುತರು ಮತ್ತು ಕಾವಾಡಿಗಳು ಬಿಸಿ ನೀರು ಸ್ನಾನ ಮಾಡಿಸಿ, ಪೌಷ್ಠಿಕ ಆಹಾರ ನೀಡಿದ್ದಾರೆ. ಮೃಗಾಲಯದಿಂದ ಅರಮನೆಗೆ ಬಂದ ಕೂಡಲೇ ಅಭಿಮನ್ಯು ಮತ್ತು ಗೋಪಿಗೂ ವಿಶೇಷ ಆಹಾರ ನೀಡಲಾಯಿತು.