ಶಿವಮೊಗ್ಗ : ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಮೆಗ್ಗಾನ್ ಆಸ್ಪತ್ರೆಯ ಹೊರಗುತ್ತಿಗೆ ಸಿಬ್ಬಂದಿಗಳು ನಾಳೆಯಿಂದ ಸೇವೆಗೆ ಹಾಜರಾಗಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಗುರುವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಈ ವಿಷಯ ತಿಳಿಸಿದರು.
ಮುಷ್ಕರದಲ್ಲಿ ಭಾಗವಹಿಸಿದ ಎಲ್ಲಾ ಸಿಬ್ಬಂದಿಗಳಿಗೂ ಮತ್ತೆ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. ಹೊಸ ಗುತ್ತಿಗೆ ಸಂಸ್ಥೆಯ ಅಡಿಯಲ್ಲಿ ಇದೇ ಸಿಬ್ಬಂದಿಗಳನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಕರೋನಾ ಸಂದರ್ಭದಲ್ಲಿ ಕರ್ತವ್ಯಕ್ಕೆ ಯಾವುದೇ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಹೊರಗುತ್ತಿಗೆ ಸಂಸ್ಥೆಯ ವಿರುದ್ಧ ಹಲವು ಆರೋಪಗಳಿವೆ. ಸಿಬ್ಬಂದಿಗಳ ನೇಮಕಕ್ಕೆ ಹಣ ಪಡೆಯುವುದು, ಗೌರವ ಧನದಲ್ಲಿ ಕಡಿತ ಮಾಡುವುದು ಇತ್ಯಾದಿ ದೂರುಗಳಿದ್ದು, ಹೊಸ ಗುತ್ತಿಗೆ ಸಂಸ್ಥೆ ಇಂತಹ ಅಕ್ರಮ ಎಸಗುವುದು ಕಂಡು ಬಂದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಕರೋನಾದಂತಹ ಇಂತಹ ತುರ್ತು ಸಂದರ್ಭದಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಹೇಳಿದರು.
ಪ್ರಸ್ತುತ ಮೆಗ್ಗಾನ್ನಲ್ಲಿ 111 ಮಂದಿ ಸೆಕ್ಯೂರಿಟಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅವರನ್ನು ಇನ್ನು ಮುಂದೆ ಹಂತ ಹಂತವಾಗಿ ಹೋಂಗಾರ್ಡ್ ಅಡಿಯಲ್ಲಿ ಸೇವೆಗೆ ತೆಗೆದುಕೊಳ್ಳಬೇಕು. ಇನ್ನುಳಿದಂತೆ 93 ನರ್ಸ್ಗಳು, 78ಲ್ಯಾಬ್ ಅಸಿಸ್ಟೆಂಟ್, 8ಮಂದಿ ಫಾರ್ಮಸಿಸ್ಟ್ ಮತ್ತು 183 ಸ್ವಚ್ಛತಾಗಾರರ ಸೇವೆಯನ್ನು ಹೊಸ ಗುತ್ತಿಗೆದಾರ ಸಂಸ್ಥೆಯಡಿಯಲ್ಲಿ ಮುಂದುವರೆಸಬೇಕು. ಎಲ್ಲಾ ಸಿಬ್ಬಂದಿ ಸಮರ್ಪಕವಾಗಿ ಸೇವೆ ಒದಗಿಸುವುದನ್ನು ಗುತ್ತಿಗೆದಾರ ಖಾತ್ರಿಪಡಿಸಿಕೊಳ್ಳಬೇಕು ಎಂದು ಹೇಳಿದರು.