Sunday, July 3, 2022

Latest Posts

ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಗುಡಿ ಕೈಗಾರಿಕೆಗೆ ಪ್ರೋತ್ಸಾಹ: ಕರಕುಶಲ ವಸ್ತು ರಫ್ತಿಗೆ ಅಂಚೆಯಣ್ಣ ಸಾಥ್

ಹೊಸ ದಿಗಂತ ವರದಿ, ಬೆಂಗಳೂರು:

  • ಸ್ವಪ್ನಾ ಮಡಪ್ಪಾಡಿ

ರಾಜ್ಯದಲ್ಲಿನ ಕರಕುಶಲ ವಸ್ತುಗಳಿಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಒದಗಿಸಲು ಭಾರತೀಯ ಅಂಚೆ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಪರಸ್ಪರ ಒಪ್ಪಂದಕ್ಕೆ ಮುಂದಾಗಿವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದಲ್ಲಿನ ಕರಕುಶಲ ವಸ್ತುಗಳಿಗೆ ಭಾರಿ ಬೇಡಿಕೆ ಇದೆ. ಅದರಲ್ಲೂ ಗುಡಿ ಕೈಗಾರಿಕೆ, ಕೈಮಗ್ಗಗಳ ಉತ್ಪನ್ನಗಳನ್ನು ವಿದೇಶಿಗರು ಹೆಚ್ಚು ಇಷ್ಟ ಪಡುತ್ತಾರೆ. ಮೈಸೂರು ಸೀರೆ, ಮೈಸೂರು ಸ್ಯಾಂಡಲ್ ಸಾಬೂನು, ಚನ್ನಪಟ್ಟಣದ ಬೊಂಬೆಗಳು, ಕೊಪ್ಪಳದ ಕಿನ್ನಾಳ ಆಟಿಕೆಗಳ ಸಹಿತ ನಾನಾ ಕರಕುಶಲ ವಸ್ತುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಕ್ಕೆ ಅವಕಾಶ ಇದೆ. ಇದಕ್ಕೆ ಮಾರುಕಟ್ಟೆ ಒದಗಿಸಲು ಕಲಾವಿದರಿಗೆ ಸಾಧ್ಯವಾಗುತ್ತಿಲ್ಲ. ಈ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರವು ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಕುಶಲಕರ್ಮಿಗಳ ಕೈ ಹಿಡಿದಿದೆ. ಈ ಕಲಾವಿದರು ತಯಾರಿಸುವ ವಸ್ತುಗಳನ್ನು ಜಾಗತಿಕ ಮಾರು ಕಟ್ಟೆಗೆ ರಫ್ತು ಮಾಡಲು ಸೂಕ್ತ ವೇದಿಕೆಯೊಂದನ್ನು ಅಂಚೆ ಇಲಾಖೆ ಒದಗಿಸಿಕೊಡಲಿದೆ.

ದೇಶೀ ಉತ್ಪನ್ನಗಳಿಗೆ ಒತ್ತು ನೀಡುವಂತೆ ಕೇಂದ್ರವು ಈಗಾಗಲೇ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ. ರಾಜ್ಯವು ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕಾರಣ ರಫ್ತಿಗೆ ಹೆಚ್ಚು ಸಮಸ್ಯೆ ಉದ್ಭವಿಸದು. ಜತೆಗೆ ಸರ್ಕಾರ ಈಗಾಗಲೇ 5 ಜಿಲ್ಲೆಗಳನ್ನು ಗುರುತಿಸಿದ್ದು ಅಲ್ಲಿನ ವಿಶೇಷ ಉತ್ಪನ್ನಗಳನ್ನು ಗುರುತಿಸಿ ಮಾರುಕಟ್ಟೆ ಒದಗಿಸಲು ಪ್ರೋತ್ಸಾಹಿಸುತ್ತಿದೆ. ಇದನ್ನಾಧರಿಸಿ ವಸ್ತುಗಳನ್ನು ವಿದೇಶಕ್ಕೆ ರಫ್ತು ಮಾಡಲು ಅಂಚೆ ಇಲಾಖೆ ಹಾಗೂ ರಾಜ್ಯ ಸರ್ಕಾರ ಸದ್ಯದಲ್ಲೇ ಒಡಂಬಡಿಕೆ ಮಾಡಿಕೊಳ್ಳಲು ನಿರ್ಧರಿಸಿದೆ.


ಲಾಭ ಗಳಿಕೆ ಇಲ್ಲದೆ ರಫ್ತಿಗೆ ಅವಕಾಶ: ಕೇಂದ್ರ ವಾಣಿಜ್ಯ ಸಚಿವಾಲಯವು ಅಂಚೆ ಇಲಾಖೆಗೆ ಸ್ಥಳೀಯ ಕಲಾವಿದರ ಉತ್ಪನ್ನಗಳ ರಫ್ತಿಗೆ ಮುತುವರ್ಜಿ ವಹಿಸಲು ಸೂಚಿಸಿದೆ. ಈ ಉಪಕ್ರಮ ಆಧರಿಸಿ ರಾಜ್ಯ ಸರ್ಕಾರ ಪ್ರತಿ ಜಿಲ್ಲೆಯಲ್ಲಿ ರಫ್ತು ಅಭಿವೃದ್ಧಿ ಕೇಂದ್ರವನ್ನು ಆರಂಭಿಸಲಿದೆ. ಈ ಕೇಂದ್ರಗಳಲ್ಲಿ ಉತ್ಪನ್ನಗಳ ದರ ನಿಗದಿ, ಕಲಾವಿದರನ್ನು ಒಗ್ಗೂಡಿಸುವ ಕೆಲಸ ನಿರ್ವಹಿಸಲು ಸಮಿತಿ ರಚನೆಯಾಗಲಿದೆ. ವಿದೇಶದ ಗ್ರಾಹಕರು ಅಂಚೆ ಇಲಾಖೆ ಮೂಲಕ ಉತ್ಪನ್ನಗಳನ್ನು ಕಾಯ್ದಿರಿಸಿದರೆ ಅವುಗಳನ್ನು ಇಲಾಖೆಯೆ ಪ್ಯಾಕಿಂಗ್, ಸಾಗಣೆ ಮಾಡುವ ಹೊಣೆ ವಹಿಸಲಿದೆ.

ದೇವನಹಳ್ಳಿಯಲ್ಲಿ ಟ್ರಾನ್ಸ್‌ಮಿಷನ್ ಕೇಂದ್ರ: ಅಂತಾರಾಷ್ಟ್ರೀಯ ಸರಕು ಸಾಮಾಗ್ರಿಗಳನ್ನು ವೇಗವಾಗಿ ಗ್ರಾಹಕರಿಗೆ ತಲುಪಿಸುವುದು ಹಾಗೂ ಅಂತಾರಾಷ್ಟ್ರೀಯ ಮೇಲ್‌ಗಳಿಗೆ ಶೀಘ್ರವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆ ದೇವನಹಳ್ಳಿಯಲ್ಲಿ ಅಂತಾರಾಷ್ಟ್ರೀಯ ಪೋಸ್ಟಲ್ ಟ್ರಾನ್ಸ್‌ಮಿಷನ್ ಕೇಂದ್ರವನ್ನು ಸ್ಥಾಪಿಸುತ್ತಿದೆ. 40-50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಕಾಮಗಾರಿ ಮುಂದಿನ ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದೆ.

ಡಿಜಿಟಲ್ ವ್ಯವಸ್ಥೆಯತ್ತ ದೃಷ್ಟಿ:ಅಂಚೆ ಇಲಾಖೆ ಪತ್ರ ವ್ಯವಹಾರಗಳಿಗಾಗಿ ಮಾತ್ರ ಸೀಮಿತವಾಗದೆ ಡಿಜಿಟಲ್ ವ್ಯವಸ್ಥೆಯತ್ತ ಹೆಚ್ಚಿನ ದೃಷ್ಟಿ ಹರಿಸಿದೆ. ಆನ್‌ಲೈನ್ ಬ್ಯಾಂಕಿಂಗ್‌ನಿಂದ ಹಿಡಿದು ಕಿಯಾಸ್ಕ್ ಹಾಗೂ ಇತರೆ ವ್ಯವಹಾರಗಳು ಕೂಡ ಆನ್‌ಲೈನ್‌ಗೆ ಮೇಲ್ದರ್ಜೆಗೇರಿವೆ. ಕರಕುಶಲ ವಸ್ತುಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲು ನಿಗಾ ವಹಿಸಲಾಗುವುದು ಎಂದು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss