Sunday, February 28, 2021

Latest Posts

‘ಮೇರಾ ದೇಶ್ ಮೇರಾ ಸಂದೇಶ್’ ರಾಷ್ಟ್ರ ಪರ್ಯಟನೆಯಲ್ಲಿ ಪ್ರಯಾಗದ ತರುಣ ಗೌರವ್ ತಿವಾರಿ

ಹೊಸ ದಿಗಂತ ವರದಿ, ಮಂಗಳೂರು

ಹೆಸರು ಗೌರವ್ ತಿವಾರಿ. ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಬಳಿಯ ಕುಂಡಪ್ರತಾಪ್‌ಗಢದ ನಿವಾಸಿ. ಅರ್ಥಶಾಸ್ತ್ರ – ತತ್ವಶಾಸ್ತ್ರಗಳಲ್ಲಿ ಅಧ್ಯಯನ ನಡೆಸಿ ಯೋಗದಲ್ಲೂ ಅಧ್ಯಯನ, ಸಾಧನೆಗೈದಿದ್ದಾರೆ.  ಉತ್ತರಪ್ರದೇಶ, ಈಶಾನ್ಯ ರಾಜ್ಯಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕ್ ಆಗಿ ಸೇವೆ ಸಲ್ಲಿಸಿ, ಇದೀಗ ಅವರು ನಮ್ಮ ದೇಶವನ್ನು ಅರಿಯಬೇಕು ಎಂಬ ಸಂಕಲ್ಪದೊಂದಿಗೆ ಒಂದು ವರ್ಷ ಕಾಲ ರಾಷ್ಟ್ರ ಪರ್ಯಟನ್  ಆರಂಭಿಸಿದ್ದಾರೆ.

26ರ ಹರೆಯದ ತರುಣ….
‘ಮೇರಾ ದೇಶ್ ಮೇರಾ ಸಂದೇಶ್’ (ನನ್ನ ದೇಶ ನನ್ನ ಸಂದೇಶ) ಎಂಬ ಘೋಷ ವಾಕ್ಯದೊಂದಿಗೆ ತಮ್ಮ ರಾಷ್ಟ್ರ ಪರ್ಯಟನೆ ಯನ್ನು ಹಮ್ಮಿಕೊಂಡಿದ್ದಾರೆ.ಈಗಾಗಲೇ ಮೇಘಾಲಯ, ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ಹರ್ಯಾಣ, ದಿಲ್ಲಿ, ರಾಜಸ್ತಾನ, ಗುಜರಾತ್, ಮಹಾರಾಷ್ಟ್ರ, ಗೋವಾ ಆಗಿ ಇದೀಗ ಕರ್ನಾಟಕದಲ್ಲಿ ಕಾರವಾರದಿಂದ ತಮ್ಮ ಯಾತ್ರೆಯನ್ನು ಮುಂದುವರಿಸಿದ್ದಾರೆ 26ರ ಹರೆಯದ ಈ ತರುಣ.

‘ಹೊಸದಿಗಂತ’ ಜೊತೆ ಅನಿಸಿಕೆ…
ಮೇಘಾಲಯದ ಶಿಲ್ಲಾಂಗ್‌ನಿಂದ ಕಳೆದ ವರ್ಷದ ಅಕ್ಟೋಬರ್ ೧೦ರಂದು ತಮ್ಮ ಯಾತ್ರೆಯನ್ನು ಆರಂಭಿಸಿರುವ ಗೌರವ್ ತಿವಾರಿಯವರು, ಕಾರವಾರದಿಂದ ತಮ್ಮ ಕರ್ನಾಟಕ ಯಾತ್ರೆಯನ್ನು ಮುಂದುವರಿಸಿದ್ದಾರೆ. ಮಂಗಳೂರಿಗೆ ಆಗಮಿಸಿದ್ದ ಅವರನ್ನು ‘ಹೊಸದಿಗಂತ’ ಮಾತನಾಡಿಸಿದಾಗ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ವಿವಿಧೆಡೆಗಳಿಗೆ ಸಂದರ್ಶನ…
ಆರಂಭದಲ್ಲಿ ಪಾದಯಾತ್ರೆ, ಸೈಕಲ್ ಮೂಲಕ ಮತ್ತು ಅನಂತರ ಬಸ್ ಮೂಲಕ ಯಾತ್ರೆ ಕೈಗೊಂಡು ಸಮಾಜದ ವಿವಿಧ ಜನವರ್ಗಗಳನ್ನು, ಸ್ವಾಮೀಜಿಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಭೇಟಿ ಮಾಡುತ್ತಿದ್ದಾರೆ.

ದೇಶದ ವೈವಿಧ್ಯ ಅರಿಯುವ ತವಕ…
ಯಾತ್ರೆಯ ಹಿಂದಿದ್ದ ಪ್ರೇರಣೆಯನ್ನು ಅವರು ವಿವರಿಸಿದ್ದು ಹೀಗೆ: ಕ್ರಿಮಿನಲ್ ವ್ಯಕ್ತಿಯೊಬ್ಬನ ಮಗನನ್ನು ಕ್ರಿಮಿನಲ್ ವ್ಯಕ್ತಿಯ ಮಗ ಎಂದು ಗುರುತಿಸುವಂತೆ ವ್ಯಕ್ತಿ, ಸಮಾಜ, ರಾಷ್ಟ್ರವನ್ನು ಆಯಾ ಹಿನ್ನೆಲೆ, ಪರಂಪರೆ, ಸಭ್ಯತೆಗಳ ಆಧಾರದಲ್ಲಿ ಗುರುತಿಸಲಾಗುತ್ತದೆ. ನಮ್ಮ ದೇಶ ಶ್ರೇಷ್ಠ ಧರ್ಮ, ಸಂಸ್ಕೃತಿ, ಪರಂಪರೆ, ಸಭ್ಯತೆ, ಮೌಲ್ಯಗಳ ನೆಲೆಯಲ್ಲಿ ಗುರುತಿಸಿಕೊಂಡಿದೆ. ಪರಿಸರ ಕುರಿತಂತೆ ನಮ್ಮ ಸಂಸ್ಕೃತಿಯಲ್ಲಿ ಹೇಳಲಾಗಿರುವ ಅಂಶ, ಸಂಸ್ಕೃತಿ, ಶಿಕ್ಷಣ, ಯೋಗ ಇತ್ಯಾದಿಗಳು ನೀಡುವ ಲೋಕಹಿತದ ಆಶಯವನ್ನು ನಾವು ಸರಿಯಾಗಿ ಅರಿತುಕೊಂಡು ಜಗತ್ತಿಗೆ ಅದನ್ನು ತಿಳಿಸಿಕೊಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶದ ವೈವಿಧ್ಯಮಯ ಜೀವನ ವಿಧಾನ, ಆಚಾರ, ವಿಚಾರ, ಪರಂಪರೆಗಳನ್ನು ಅರಿತುಕೊಳ್ಳಬೇಕೆಂಬ ಆಶಯದೊಂದಿಗೆ ಪರ್ಯಟನೆ ಕೈಗೊಂಡಿದ್ದೇನೆ.

ಎರಡು ಉದಾತ್ತ ಧ್ಯೇಯ…
ಏಕಂ ಸತ್‌ವಿಪ್ರಾಃ ಬಹುಧಾ ವದಂತಿ…ಸತ್ಯ ಒಂದೇ, ಅದನ್ನು ಜ್ಞಾನಿಗಳು ವಿವಿಧ ರೀತಿಯಲ್ಲಿ ಬಣ್ಣಿಸುತ್ತಾರೆ ಎಂಬುದು ಒಂದೆಡೆಯಾದರೆ, ಸರ್ವೇ ಸಂತು ನಿರಾಮಯಾಃ… ಎಲ್ಲರೂ ದುಃಖದಿಂದ ದೂರವಾಗಿರಲಿ, ಸುಖಮಯವಾಗಿರಲಿ, ಶಾಂತಿ – ನೆಮ್ಮದಿಯಿಂದಿರಲಿ ಎಂಬ ನಮ್ಮ ರಾಷ್ಟ್ರದ ಎರಡು ಉದಾತ್ತ ಧ್ಯೇಯಗಳನ್ನು ಮುಂದಿಟ್ಟುಕೊಂಡು ಈ ಪರ್ಯಟನೆ ನಡೆಸುತ್ತಿದ್ದೇನೆ.

ಈ ಯಾತ್ರೆಯಲ್ಲಿ ಲಭಿಸಿರುವ ಸ್ಪಂದನ ಕುರಿತಂತೆ ಅವರು ಹೇಳಿದ್ದು….
ಯಾತ್ರೆಯಲ್ಲಿ ಹಲವು ಅನುಭವಗಳಾಗಿವೆ. ಆಯಾ ಪ್ರದೇಶದ ಜನರು ತೋರುವ ಪ್ರೀತಿ, ಅವರ ಜೀವನ ವೈವಿಧ್ಯ ಇವೆಲ್ಲ ಅನನ್ಯ. ಉದಾಹರಣೆಗೆ ದ.ಕ.ಜಿಲ್ಲೆಯಲ್ಲಿ ತುಳುನಾಡಿನ ಭೂತಾರಾಧನೆ  ಅತ್ಯಂತ ವೈಶಿಷ್ಟ್ಯಪೂರ್ಣವಾದುದಾಗಿದೆ. ಇಲ್ಲಿನ  ಆರ್ಥಿಕ ಪ್ರಗತಿ, ಜೀವನ ವಿಧಾನಗಳು ಕೂಡಾ ಗಮನ ಸೆಳೆಯುತ್ತವೆ. ಉಡುಪಿ , ದ.ಕ.ಜಿಲ್ಲೆಯಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು, ಕ್ಷೇತ್ರ ಪ್ರಮುಖರು, ಸಹಕಾರಿ ಸಂಸ್ಥೆಗಳು, ಸ್ವಾಮೀಜಿಗಳು , ಸಾಧಕರನ್ನು ಭೇಟಿ ಮಾಡಿದ್ದು, ವಿಶೇಷ ಅನುಭವ ನೀಡಿದೆ ಎನ್ನುತ್ತಾರೆ.

ಮುಂದಿನ ಯೋಜನೆ ಏನು?
ಮುಂದಿನ ಯೋಜನೆ ಬಗ್ಗೆ ಕೇಳಿದಾಗ, ಫೆ.೧೫ರಿಂದ ಮಾ.೧೦ರವರೆಗೆ ಚೆನ್ನೈಯಿಂದ ಕೊಯಮತ್ತೂರುವರೆಗೆ ೫೪೦ಕಿ.ಮೀ.ಪಾದಯಾತ್ರೆ ಮೂಲಕ ಪರ್ಯಟನೆ ಮುಂದುವರಿಸಲಿದ್ದೇನೆ. ಅನಂತರ ಒಂದು ತಿಂಗಳ ಕಾಲ ಕನ್ಯಾಕುಮಾರಿ ಸೇರಿದಂತೆ ಕೇರಳ ಯಾತ್ರೆ ಕೈಗೊಳ್ಳಲಿದ್ದೇನೆ ಎನ್ನುತ್ತಾರೆ ಗೌರವ್ ತಿವಾರಿ .

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!