ಹೊಸ ದಿಗಂತ ವರದಿ, ಮೇಲುಕೋಟೆ:
ಹರಕೆ ಸಾಕಾರಗೊಂಡ ಹಿನ್ನಲೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬುಧವಾರ ಒಂದೇ ದಿನದಲ್ಲಿ ಕಲಿಯುಗ ದೈವಗಳಾದ ತಿರುಪತಿ ವೆಂಕಟೇಶ್ವರಸ್ವಾಮಿ ಮತ್ತು ಮೇಲುಕೋಟೆಯ ಶ್ರೀಚೆಲುವನಾರಾಯಣಸ್ವಾಮಿಯ ದರ್ಶನವನ್ನು ಪಡೆದರು.
ತಿರುಪತಿಯ ಶ್ರೀನಿವಾಸನ ದರ್ಶನ ಮುಗಿಸಿ ಮೈಸೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ಶಿವರಾಜ್ ರಸ್ತೆಯ ಮೂಲಕ ಮದ್ಯಾಹ್ನ 3 ಗಂಟೆಯ ವೇಳೆಗೆ ಮೇಲುಕೋಟೆಗೆ ಆಗಮಿಸಿದರು. ದಂಪತಿಸಮೇತರಾಗಿ ಆಗಮಿಸಿದ ಮುಖ್ಯಮಂತ್ರಿಗಳನ್ನು ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಿದರು. ನಂತರ ದೇವಾಲಯಕ್ಕೆ ಆಗಮಿಸಿದ ಶಿವರಾಜ್ ಸಿಂಗ್ ಚೌಹಾಣ್ ರಿಗೆ ಪೂರ್ಣಕುಂಬ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಮೊದಲಿಗೆ ಮೂಲಮೂರ್ತಿ ಚೆಲುವನಾರಾಯಣಸ್ವಾಮಿ, ಯದುಗಿರಿ ನಾಯಕಿ ಭಗವದ್ರಾಮಾನುಜಾಚಾರ್ಯರ ದರ್ಶನ ಪಡೆದರು. ರಾಮಾನುಜರ ಸನ್ನಿಧಿಯಲ್ಲಿ ಮುಖ್ಯಮಂತ್ರಿಗಳ ಕುಟುಂಬಕ್ಕೆ ವೇದ ಮಂತ್ರದೊoದಿಗೆ ರಾಜಾಶೀರ್ವಾದ ಮಾಡಲಾಯಿತು.
ಬೆಳ್ಳಿಯ ರಥ ನಿರ್ಮಾಣಕ್ಕೆ ಶೀಘ್ರ ಚಾಲನೆ : ಚೆಲುವನಾರಾಯಣಸ್ವಾಮಿಯ ದರ್ಶನ ಭಾಗ್ಯದಿಂದ ನನಗೆ ಅಧಿಕಾರ ಲಭಿಸಿದೆ. ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಮತ್ತು ಸ್ಥಾನೀಕರು, ರಾಮಾನುಜರ ಸನ್ನಿಧಿಯ ಅರ್ಚಕರ ಆಶಯದಂತೆ ಸ್ವಾಮಿಗೆ ಸಮರಭೂಪಾಲ ಬೆಳ್ಳಿಯ ರಥ ಅರ್ಪಿಸಲು ತಕ್ಷಣ ಕಾರ್ಯ ಆರಂಭಮಾಡಿ ನಾನೇ ಖುದ್ದಾಗಿ ಭಗವಂತನಿಗೆ ಅರ್ಪಿಸುತ್ತೇನೆ. ಎಂದು ವಾಗ್ದಾನ ಮಾಡಿದರು. ಅಧಿಕಾರ ಬಲದಿಂದಾಗಿ ಬಡವರಿಗೆ ಮತ್ತು ನೊಂದವರಿಗೆ ಸಹಾಯ ಮಾಡಲು ಭಗವಂತ ಮತ್ತಷ್ಟು ಶಕ್ತಿ ನೀಡಿದ್ದಾನೆ ಎಂದರು.