ಅಮರಾವತಿ: ರಾಜ್ಯ ವಿಧಾನ ಪರಿಷತ್ ರದ್ದುಗೊಳಿಸುವ ಕುರಿತು ವಿಧಾನಸಭೆಯಲ್ಲಿ ಅನುಮೋದನೆ ದೊರೆತ ಬಳಿಕ ವೈ.ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದೆ.
ಸೋಮವಾರ ವಿಧಾನ ಪರಿಷತ್ ರದ್ದುಗೊಳಿಸುವುದರ ಕುರಿತು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿತ್ತು. ಈ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿದ ಬಳಿಕ ಆಡಳಿತರೂಢ ವೈ.ಎಸ್. ಆರ್ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಇರುವುದರಿಂದ ಸುಲಭವಾಗಿ ಅನುಮೋದನೆ ಸಿಕ್ಕಿತು.
ಈ ಬೆನ್ನಲೇ ಮೇಲ್ಮನೆ ರದ್ದತಿ ಕುರಿತಂತೆ ಕೈಗೊಂಡ ನಿರ್ಣಯದ ಪ್ರತಿಯನ್ನು ಕೇಂದ್ರಕ್ಕೆ ಜಗನ್ ಸರ್ಕಾರ ಕಳುಹಿಸಿದೆ. ವಿಧಾನ ಪರಿಷತ್ ರದ್ದತಿ ನಿರ್ಣಯದ ಪರವಾಗಿ ಕೆಳಮನೆಯಲ್ಲಿ ಎಷ್ಟು ಮತಗಳು ಬಿದ್ದಿವೆ ಎಂಬುದರ ಬಗ್ಗೆಯೂ ಈ ಪ್ರಸ್ತಾಪದಲ್ಲಿ ಉಲ್ಲೇಖಿಸಲಾಗಿದೆ.
ವಿಧಾನ ಪರಿಷತ್ ರದ್ದತಿ ನಿರ್ಣಯದ ಪರವಾಗಿ 133 ಮತಗಳು ಬಿದ್ದಿದೆ. ನಿರ್ಣಯದ ವಿರುದ್ಧ ಯಾವುದೇ ಮತ ಚಲಾವಣೆಯಾಗಿಲ್ಲ. ಈ ಮೂಲಕ ಆಂಧ್ರದಲ್ಲೇ ವಿಧಾನ ಪರಿಷತ್ ಅನ್ನು ಎರಡನೇ ಬಾರಿ ವಿಸರ್ಜಿಸಲಾಗಿದೆ.
ವೈ.ಎಸ್ ರಾಜಶೇಖರ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯ ವಿಧಾನ ಪರಿಷತ್ ಆರಂಭಿಸಲಾಗಿತ್ತು. ಅಂದಿನ ವಿಧಾನ ಪರಿಷತ್ ಅನ್ನು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ರದ್ದುಗೊಳಿಸಿರುವುದು ಖಂಡನೀಯ. ಇದರ ವಿರುದ್ಧ ನಾವು ಪ್ರತಿಭಟನೆ ನಡೆಸಲಿದ್ದೇವೆ. ಪ್ರಜಾಪ್ರಭುತ್ವ ದ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಲುವಾಗಿ ವಿಧಾನ ಪರಿಷತ್ ಬೇಕಿದೆ ಎಂದು ಟಿಡಿಪಿ ಮತ್ತು ಜನಸೇನೆ ಪಕ್ಷಗಳು ಆರೋಪಿಸಿವೆ.