ಹೊಸದಿಗಂತ ವರದಿ, ಮಂಡ್ಯ
ಮೈಷುಗರ್ ಕಾರ್ಖಾನೆಯನ್ನು ಖಾಸಗೀಕರಗೊಳಿಸುವ ರಾಜ್ಯ ಸರ್ಕಾರದ ನಿಧಾರ ರೈತ ವಿರೋಧಿಯಾಗಿದ್ದು, ಕಾಂಗ್ರೆಸ್ ಪಕ್ಷವೂ ಸಹ ವಿರೋಧಿಸುತ್ತದೆ ಎಂದು ಕೆಪಿಸಿಸಿ ವಕ್ತಾರ ಎನ್. ಚಲುವರಾಯಸ್ವಾಮಿ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಬುಧವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಮತಗಟ್ಟೆ ಏಜೆಂಟ್ ಬೂತ್-2 ನೇಮಕಾತಿಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ತೀವ್ರ ನಷ್ಟಕ್ಕೆ ಸಿಲುಕಿರುವ ಸರ್ಕಾರಿ ಸ್ವಾಮ್ಯದ ಏಕೈಕ ಸಕ್ಕರೆ ಕಾರ್ಖಾನೆಯ ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಖಾಸಗಿಯವರಿಗೆ ವಹಿಸುವುದಕ್ಕೆ ಭಾಗಶಃ ಒಪ್ಪಿದ್ದೆವು.
ಆದರೆ, 40 ವರ್ಷಗಳ ಕಾಲ ಹೊರಗುತ್ತಿಗೆ ನೀಡುತ್ತಿರುವುದಕ್ಕೆ ಯಾರೊಬ್ಬರ ಸಹಮತವೂ ಇರಲಿಲ್ಲ. ರೈತರ ಹಿತಾಸಕ್ತಿಯನ್ನು ಕಡೆಗಣಿಸಿ, ಅವರ ಅಭಿಪ್ರಾಯ ಸಂಗ್ರಹಿಸದೆ ಖಾಸಗಿಯವರಿಗೆ ವಹಿಸುವ ನಿರ್ಧಾರ ರೈತ ವಿರೋಧಿಯಾಗಿದೆ ಎಂದು ಟೀಕಿಸಿದರು.
ಜೆಡಿಎಸ್ ಅಧಿಕಾರವಧಿಯಲ್ಲಿ ಮುಚ್ಚಿದ್ದ ಮೈಷುಗರ್ ಕಾರ್ಖಾನೆಯನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಜಿಲ್ಲೆಯವರಾದ ಸಿಎಂ ಯಡಿಯೂರಪ್ಪನವರು ಪುನಶ್ಚೇತನಗೊಳಿಸುವುದಾಗಿ ಭರವಸೆ ನೀಡಿದ್ದರು. ಬಳಿಕ ಒ ಅಂಡ್ ಎಂ ಮೂಲಕ ಕಾರ್ಖಾನೆಯನ್ನು ಆರಂಭಿಸುವುದಾಗಿ ಹೇಳಿ ಕೊನೆಗೆ ಖಾಸಗಿಯವರಿಗೆ ಗುತ್ತಿಗೆ ವಹಿಸುವ ನಿರ್ಧಾರ ಮಾಡಿರುವುದನ್ನು ನಾವು ಬೆಂಬಲಿಸುವುದಿಲ್ಲ. ಸರ್ಕಾರ ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.