Monday, August 8, 2022

Latest Posts

ಮೈಸೂರಿನಲ್ಲಿ ಎರಡನೇ ಹಂತದ ಕೋವಿಡ್ ಲಸಿಕೆ ಅಭಿಯಾನಕ್ಕೆ ಚಾಲನೆ

ಹೊಸ ದಿಗಂತ ವರದಿ,ಮೈಸೂರು:

ಮಹಾಮಾರಿ ಕೋವಿಡ್ ವಿರುದ್ಧ ರಕ್ಷಣೆ ನೀಡುವ ಎರಡನೇ ಹಂತದ ಲಸಿಕೆ ನೀಡುವ ಅಭಿಯಾನವನ್ನು ಅರಮನೆ ಮೈಸೂರಿನಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಮೈಸೂರಿನ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಭರತನಾಟ್ಯ ಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ, ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಲಸಿಕೆ ಪಡೆದುಕೊಂಡರು.
ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಮೋದಾ ದೇವಿ ಅವರು, ಲಸಿಕೆ ಪಡೆದುಕೊಳ್ಳಲು ಯಾರಿಗೆ ಅನುಕೂಲವಿಲ್ಲವೋ ಅಂತಹ ಒಂದು ಸಾವಿರ ಮಂದಿಗೆ ನನ್ನ ಕಡೆಯಿಂದ ಲಸಿಕೆ ಕೊಡಿಸುತ್ತೇನೆ. ಅವರು ಜೆಎಸ್‌ಎಸ್ ಆಸ್ಪತ್ರೆಗೆ ನೋಂದಣಿ ಮಾಡಿಕೊಂಡು, ಸಂಪರ್ಕಿಸಿದರೆ ಶುಲ್ಕವಿಲ್ಲದೆ ಲಸಿಕೆ ಪಡೆದುಕೊಳ್ಳಬಹುದು. ಅದರ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ ಎಂದರು.
ಈಗ ನಾನು ಲಸಿಕೆ ತೆಗೆದುಕೊಳ್ಳುತ್ತಿಲ್ಲ. ನನ್ನ ಸರದಿ ಬಂದಾಗ ನೋಂದಣಿ ಮಾಡಿಕೊಂಡು, ಲಸಿಕೆ ಪಡೆದುಕೊಳ್ಳುತ್ತೇನೆ. ಆಗ ತಿಳಿಸುತ್ತೇನೆ. ಭಯ ಪಡದೆ ಲಸಿಕೆ ತೆಗೆದುಕೊಳ್ಳಿ, ಬಹಳ ಬೇಗ ದೇಶ ಕೊರೊನಾ ಮುಕ್ತವಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆ ನಿರ್ದೇಶಕ ಕರ್ನಲ್ ಎಂ.ದಯಾನoದ, ವೈದ್ಯಕೀಯ ಅಧೀಕ್ಷರಾದ ಡಾ.ಗುರುಸ್ವಾಮಿ, ಪ್ರಾಂಶುಪಾಲ ಡಾ.ಎಚ್.ಬಸವನಗೌಡಪ್ಪ ಇತರರು ಉಪಸ್ಥಿತರಿದ್ದರು.
ಅಭಿಯಾನದ ಮೊದಲ ಎರಡು ಹಂತಗಳಲ್ಲಿ ಆರೋಗ್ಯ ಕಾರ್ಯಕರ್ತರು, ಕೋವಿಡ್ ಮುಂಚೂಣಿ ಯೋಧರಿಗೆ ಲಸಿಕೆ ವಿತರಿಸಲಾಗಿದೆ. ಈ ಬಾರಿ 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ, ಮಧುಮೇಹ ಒಳಗೊಂಡ ವಿವಿಧ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವ 45 ರಿಂದ 59 ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುತ್ತದೆ.
ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಉಚಿತವಾಗಿ ಲಭ್ಯವಾಗಲಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯ ಪ್ರತಿ ಡೋಸ್ ಗೆ 250 ರೂ. ನಿಗದಿ ಪಡಿಸಲಾಗಿದೆ. ಜಿಲ್ಲಾಡಳಿತವು ಲಸಿಕೆ ಅಭಿಯಾನಕ್ಕೆ ಆರೋಗ್ಯ ಕೇಂದ್ರವನ್ನು ಗುರುತಿಸಿದೆ. ಅಭಿಯಾನದ ಮೊದಲ ದಿನ ಸರ್ಕಾರಿ ಸ್ವಾಮ್ಯದ ಆರೋಗ್ಯ ಸಂಸ್ಥೆಗಳಾದ ಮೈಸೂರು ವೈದ್ಯಕೀಯ ಮಹಾವಿದ್ಯಾಲಯ (ಟ್ರಾಮಾ ಸೆಂಟರ್), ಜಿಲ್ಲಾ ಆಸ್ಪತ್ರೆ, ಎಲ್ಲಾ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳು, ಖಾಸಗಿ ಸ್ವಾಮ್ಯದ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಅಪೋಲೊ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತದೆ. ಪ್ರತಿ ಲಸಿಕಾ ಕೇಂದ್ರಗಳಲ್ಲಿ ದಿನಕ್ಕೆ 200 ಫಲಾನುಭವಿಗಳಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ.
ಮೊದಲ ವಾರದಲ್ಲಿ ಮಾರ್ಚ್ 1 ರಿಂದ 6 ರವರೆಗೆ ಆನ್ ಲೈನ್ ಮೂಲಕ ನೋಂದಾಯಿಸಿಕೊoಡಿರುವ ಫಲಾನುಭವಿಗಳಿಗೆ ಹಾಗೂ ಲಸಿಕಾ ಶಿಬಿರದಲ್ಲಿ ನೋಂದಾಯಿತ ಫಲಾನುಭವಿಗಳಿಗೆ ಲಸಿಕೆ ನೀಡಲು ಯೋಜನೆ ರೂಪಿಸಲಾಗಿದೆ. ಆ ಬಳಿಕ ಲಸಿಕಾ ಶಿಬಿರಗಳನ್ನು ಫಲಾನುಭವಿಗಳ ಆದ್ಯತೆಯ ಮೇರೆಗೆ ಸೃಷ್ಟಿಸಿ, ನೋಂದಣಿ ವಿಧಾನಗಳನ್ನು ಅನುಷ್ಠಾನಕ್ಕೆ ತರಲಾಗುವುದು. ಮುಂದಿನ ದಿನಗಳಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರಗಳಂದು ಸರ್ಕಾರಿ ಆರೋಗ್ಯ ಕೇಂದ್ರಗಳು ಹಾಗೂ ವಾರದ ಎಲ್ಲಾ ದಿನಗಳಲ್ಲಿ ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಶಿಬಿರ ನಡೆಯಲಿದೆ.
ಲಸಿಕೆ ಸಂಬoಧ ಯಾವುದೇ ರೀತಿಯ ಅಡ್ಡಪರಿಣಾಮ ಮತ್ತು ಅನಿರೀಕ್ಷಿತ ಘಟನೆಗಳು ಸಂಭವಿಸಿದರೆ ತುರ್ತು ನಿರ್ವಹಣೆಗಾಗಿ ಮೈಸೂರು ವೈದ್ಯಕೀಯ ಮಹಾವಿದ್ಯಾಲಯ, ಜಿಲ್ಲಾ ಆಸ್ಪತ್ರೆ, ಎಲ್ಲಾ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು, ನೋಂದಾಯಿತ ಖಾಸಗಿ ಆರೋಗ್ಯ ಸಂಸ್ಥೆಗಳ ಆಡಳಿತ ವೈದ್ಯಾಧಿಕಾರಿಗಳು, ಅರಿವಳಿಕೆ ತಜ್ಞರು ಹಾಗೂ ಇತರೆ ತಜ್ಞರೊಳಗೊಂಡoತೆ ತುರ್ತು ಕಾರ್ಯಪಡೆ ರಚಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss