ಹೊಸದಿಗಂತ ವರದಿ, ಮೈಸೂರು:
ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಹೇರಲಾಗುತ್ತಿದ್ದ ನಿರ್ಬಂಧವನ್ನು ಸಡಿಲಗೊಳಿಸುತ್ತಿರುವ ಕಾರಣ ನಾಡ ಶಕ್ತಿ ದೇವತೆ ಚಾಮುಂಡೇಶ್ವರಿಯ ನೆಲೆವೀಡಾದ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಾಲಯಕ್ಕೆ ಭಕ್ತರಿಂದ ಹರಿದು ಬರುತ್ತಿರುವ ಆದಾಯದಲ್ಲಿ ಚೇತರಿಕೆ ಕಾಣಲಾರಂಭಿಸಿದೆ. ಬಿಗಿ ಬಂದೋ ಬಸ್ತ್ ನಡುವೆ ದೇವಸ್ಥಾನದಲ್ಲಿ ಅಕ್ಟೋಬರ್ ತಿಂಗಳ ಹುಂಡಿ ಹಣ ಎಣಿಕೆ ನಡೆದಿದ್ದು, ಒಟ್ಟು ೬೫,೬೧,೨೨೯ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ ಎಂದು ದೇವಸ್ಥಾನದ ಇಓ ಯತಿರಾಜ್ ತಿಳಿಸಿದ್ದಾರೆ.
೨೦೦೦ ಸಾವಿರ ಮುಖ ಬೆಲೆಯ ೯೮ ನೋಟು, ೫೦೦ ಮುಖಬೆಲೆಯ ೪೯೩೨ ನೋಟು, ೨೯ ಸಾವಿರ ರೂ. ನಷ್ಟು ೧ ರೂಪಾಯಿ ನಾಣ್ಯ, ೧೭ ಸಾವಿರ ರೂ. ನಷ್ಟು ೨ ರೂಪಾಯಿ ನಾಣ್ಯ ಸಂಗ್ರಹವಾಗಿದೆ. ತಾಯಿ ಚಾಮುಂಡೇಶ್ವರಿ ದೇಗುಲದ ಹುಂಡಿಯಲ್ಲಿ ಈ ಬಾರಿಯೂ ಬ್ಯಾನ್ ಆದ ನೋಟುಗಳು ಪತ್ತೆಯಾಗಿವೆ. ಬ್ಯಾನ್ ಆದ ೫೦೦ ಹಾಗೂ ೧೦೦೦ ಮುಖಬೆಲೆಯ ಅಮಾನ್ಯಗೊಂಡಿರುವ ನೋಟುಗಳು ಪತ್ತೆಯಾಗಿದೆ.