ಮೈಸೂರು: ಜನ ನಿಭಿಡ ಪ್ರದೇಶದಲ್ಲಿನ ನಡು ರಸ್ತೆಯಲ್ಲಿ ಅನುಮಾನಸ್ಪದವಾಗಿ ಬಿದ್ದಿದ್ದ ಟ್ರಾಲಿ ಸೂಟ್ ಕೇಸ್ವೊಂದು ಕೆಲಕಾಲ ಮೈಸೂರಿಗರನ್ನು ಆತಂಕಕ್ಕೀಡು ಮಾಡಿದ ಘಟನೆ ನಗರದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ಮಂಗಳವಾರ ನಡೆದಿದೆ. ಸಯ್ಯಾಜಿರಾವ್ ರಸ್ತೆಯ ಮಧ್ಯಭಾಗದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಮಾಲೀಕರಿಲ್ಲದ ನೀಲಿ ಬಣ್ಣದ ಟ್ರಾಲಿ ಸೂಟ್ ಕೇಸ್ವೊಂದು ನಿಂತಿತ್ತು. ಇದನ್ನು ಗಮನಿಸಿದ ಅಂಗಡಿಗಳ ಸಿಬ್ಬಂದಿ ಹಾಗೂ ಸ್ಥಳೀಯರನ್ನು ಗಾಬರಿಗೊಂಡು, ಪೊಲೀಸ್ ಕಂಟ್ರೋಲ್ಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದರು. ಸ್ಥಳಕ್ಕೆ ದೌಡಾಯಿಸಿದ ಕೆ.ಆರ್. ಠಾಣೆಯ ಪೊಲೀಸರು ಸೂಟ್ಕೇಸ್ ಅಕ್ಕ ಪಕ್ಕ ಬ್ಯಾರಿಕೇಡ್ಗಳನ್ನು ಹಾಕಿ ಜನರು ಅದರತ್ತ ಸುಳಿಯದಂತೆ ನೋಡಿಕೊಂಡರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಾಂಬ್ ಪತ್ತೆದಳ ಹಾಗೂ ಪೊಲೀಸರು, ರಸ್ತೆಯ ಎರಡು ಭಾಗವನ್ನು ಬಂದ್ ಮಾಡಿ ಅದನ್ನು ಬಾಂಬ್ ಪತ್ತೆ ಉಪಕರಣದಿಂದ ಶೋಧ ನಡೆಸಿದರು. ಬಳಿಕ ಸೂಟ್ ಕೇಸ್ನಲ್ಲಿ ಸ್ಫೋಟಕ ವಸ್ತುಗಳು ಇಲ್ಲದ ಕಾರಣ ಆ ಬ್ಯಾಗ್ ಅನ್ನು ಹೆಚ್ಚಿನ ಪರಿಶೀಲನೆಗಾಗಿ ವ್ಯಾನ್ನಲ್ಲಿ ತೆಗೆದುಕೊಂಡು ಹೋದರು. ಈ ಘಟನೆಯಿಂದಾಗಿ ಮಹಾಮಾರಿ ಕೊರೋನಾದ ಆತಂಕದ ನಡುವೆಯೂ ಜನರು ಹಾಗೂ ಪೊಲೀಸರಲ್ಲಿ ಆತಂಕ ಸೃಷ್ಟಿಸಿತ್ತು.