Wednesday, June 29, 2022

Latest Posts

ಮೈಸೂರಿನ 15 ಸಾವಿರ ಕುಟುಂಬಗಳಿಗೆ ಬಿಗ್ ರಿಲೀಫ್ ನೀಡಿದ ಬಿಜೆಪಿ ಸರ್ಕಾರ

ಮೈಸೂರು: ಮೈಸೂರಿನ ಕುರುಬಾರಹಳ್ಳಿ ಸ.ನಂ.೪ರ ವ್ಯಾಪ್ತಿಯ ಸಿದ್ಧಾರ್ಥ ಬಡಾವಣೆ ಸೇರಿದಂತೆ ಮೂರು ಬಡಾವಣೆಯ ೧೫ ಸಾವಿರ ಕುಟುಂಬಗಳಿಗೆ ಬಿಜೆಪಿ ಸರ್ಕಾರ ಇದೀಗ ಬಿಗ್ ರಿಲೀಫ್ ನೀಡಿದೆ. ಕಳೆದ ೨೫ ವರ್ಷಗಳಿಂದ ಈ ಬಡಾವಣೆಗಳ ನಿವಾಸಿಗಳು ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ನ್ಯಾಯವನ್ನು ನೀಡಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನಗಳನ್ನು ಖರೀದಿಸಿ, ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ೨೫ ಸಾವಿರ ಜನರು ಇದೀಗ ವಿವಾದದಿಂದ ಮುಕ್ತರಾಗಿದ್ದು, ಇನ್ನು ಮುಂದೆ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ.
ಈ ಮೂರು ಬಡಾವಣೆಗೆ ಸೇರಿದ ಒಟ್ಟು ೩೫೪.೨೯ ಎಕರೆ ಪ್ರದೇಶವನ್ನು ಬಿ.ಖರಾಬ್‌ನಿಂದ ಮುಕ್ತಗೊಳಿಸಿ, ಆ ಪ್ರದೇಶವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕಂದಾಯ ಇಲಾಖೆ ಉಚಿತವಾಗಿ ಇದೀಗ ಹಸ್ತಾಂತರ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು. ಈ ಬಗ್ಗೆ ಇಂದು ಆದೇಶ ಹೊರಡಿಸಲಾಗಿದೆ ಎಂದು ಅದರ ಪ್ರತಿಯನ್ನು ಬಿಡುಗಡೆ ಮಾಡಿದರು. ೩೫೪.೨೯ ಎಕರೆ ಪ್ರದೇಶದಲ್ಲಿ ಮುಡಾದಿಂದ ಬಡಾವಣೆಗಳನ್ನು ನಿರ್ಮಿಸಲಾಗಿತ್ತು. ನಿವೇಶನಗಳನ್ನು ಕೂಡ ಮಾರಾಟ ಮಾಡಲಾಗಿತ್ತು. ನಿವೇಶನ ಪಡೆದು, ಮನೆಕಟ್ಟಿಕೊಂಡು ೧೫ ಸಾವಿರ ಕುಟುಂಬಗಳು ವಾಸಿಸುತ್ತಿವೆ. ಆದರೆ ಈ ಪ್ರದೇಶವನ್ನು ಬಿ.ಖರಾಬು ಎಂದು ಮೈಸೂರಿನ ಈ ಹಿಂದಿನ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಇದರಿಂದಾಗಿ ಮನೆ, ನಿವೇಶನ ಕಳೆದುಕೊಂಡು ಬೀದಿಗೆ ಬೀಳುವ ಪರಿಸ್ಥಿತಿ ಕುಟುಂಬಗಳಿಗೆ ಎದುರಾಗಿತ್ತು. ಜಿಲ್ಲಾಧಿಕಾರಿಗಳ ಬಿ ಖರಾಬು ಆದೇಶದ ವಿರುದ್ಧ ನಿವಾಸಿಗಳು ಸಂಘಟನೆ ಮಾಡಿಕೊಂಡು ನ್ಯಾಯಾಲಯದಲ್ಲಿ ಕಾನೂನು ಹೋರಾಟವನ್ನು ಮಾಡುತ್ತಿದ್ದರು. ಈ ನಿವಾಸಿಗಳ ಅತಂತ್ರ ಪರಿಸ್ಥಿತಿಯನ್ನು ಶಾಸಕರು, ಸಂಸದರು ಸರ್ಕಾರದ ಗಮನಕ್ಕೆ ತಂದಿದ್ದರು. ಈ ಹಿನ್ನಲೆಯಲ್ಲಿ ೧೯೬೪ರ ಭೂ ಕಾಯ್ದೆಯ ಕಲಂ ೬೮ರ ಪ್ರಕಾರ ೩೫೪.೨೯ ಎಕರೆಯನ್ನು ಬಿ.ಖರಾಬಿನಿಂದ ಬಿಡುಗಡೆ ಮಾಡಿ, ಮುಡಾಕ್ಕೆ ಹಸ್ತಾಂತರ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯಸರ್ಕಾರ ಕ್ರಮಕ್ಕೆ ಬಿಜೆಪಿ ನಗರಾಧ್ಯಕ್ಷರ ಸ್ವಾಗತ  
ಮೈಸೂರಿನ ಕುರುಬಾರಹಳ್ಳಿ ಸ.ನಂ.೪ರ ವ್ಯಾಪ್ತಿಯ ಮೂರು ಬಡಾವಣೆಯನ್ನು ಬಿ.ಖರಾಬಿನಿಂದ ಕೈಬಿಟ್ಟು ಖಾತೆ ಮಾಡಿಕೊಡಲು ರಾಜ್ಯಸರ್ಕಾರ ಹೊರಡಿಸಿರುವ ಆದೇಶವನ್ನು ಮೈಸೂರು ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಸ್ವಾಗತಿಸಿದ್ದಾರೆ. ಹಲವು ವರ್ಷದಿಂದ ನೆನಗುದಿಗೆಗೆ ಬಿದ್ದು ನಿವಾಸಿಗಳು ಅತಂತ್ರರಾಗಿದ್ದರು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಇತ್ಯರ್ಥಪಡಿಸುವ ಮೂಲಕ ಮಾಲೀಕರಿಗೆ ಖಾತೆ ಮಾಡಿಲು ಅಧಿಕೃತವಾಗಿ ಆದೇಶ ಹೊರಡಿಸಿರುವುದು ಅಭಿನಂದನೀಯ ಎಂದು ಹೇಳಿದ್ದಾರೆ. ಶಾಸಕರಾದ ಎಸ್.ಎ.ರಾಮದಾಸ್,ಎಲ್.ನಾಗೇಂದ್ರ, ಸಂಸದ ಪ್ರತಾಪಸಿಂಹ ಮೊದಲಾದವರು ಒತ್ತಡ ಹೇರಿದ್ದರು. ವಿಶೇಷವಾಗಿ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಬಂದ ಎಸ್.ಟಿ.ಸೋಮಶೇಖರ್ ಅವರು ಮಂತ್ರಿಮoಡಲದ ಸಭೆಯಲ್ಲಿ ಹಲವು ಬಾರಿ ಪ್ರಸ್ತಾಪಿಸಿ, ಆದೇಶ ಹೊರಡಿಸಲು ಮೂಲ ಕಾರಣಕರ್ತರಾಗಿರುವುದರಿಂದ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ್ ಅವರು ಈ ಸಮಸ್ಯೆ ಪರಿಹರಿಸಿ ಆದೇಶ ಹೊರಡಿಸಿದ್ದರಿಂದ ಜನರು ನೆಮ್ಮದಿಯಿಂದ ಇರಬಹುದು ಎಂದು ತಿಳಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವರ್ಗದವರಿಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಲು ಆದೇಶ ಹೊರಡಿಸಿರುವುದರಿಂದ ಬ್ರಾಹ್ಮಣ ವರ್ಗದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ. ಹಲವು ವರ್ಷದಿಂದ ಬ್ರಾಹ್ಮಣ ಸಮುದಾಯ ಇಟ್ಟಿದ್ದ ಬೇಡಿಕೆಯನ್ನು ಸರ್ಕಾರ ಪೂರೈಸಿದ್ದರಿಂದ ಲಕ್ಷಾಂತರ ಬಡವರಿಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss