Tuesday, August 16, 2022

Latest Posts

ಮೈಸೂರು| ಎರಡು ಆಟೋಗಳ ಡಿಕ್ಕಿಯಲ್ಲಿ ಆರಂಭವಾದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯ

ಮೈಸೂರು: ಎರಡು ಆಟೋಗಳ ನಡುವೆ ಉಂಟಾದ ಡಿಕ್ಕಿಯಿಂದಾಗಿ ನಡೆದ ಜಗಳ ಇಬ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಕೋಟೆಹುಂಡಿ ಸಮೀಪ ಭಾನುವಾರ ರಾತ್ರಿ ನಡೆದಿದೆ.

ಯಡಹಳ್ಳಿ ಗ್ರಾಮದ ಟಿ.ಮಂಜುನಾಥ್ (೩೩) ಹಾಗೂ ಟಿವಿಎಸ್ ಕಾರ್ಖಾನೆಯ ನೌಕರ ಆರ್.ಮಂಜುನಾಥ್ (೩೫) ಕೊಲೆಯಾದವರು. ಇವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪದ ಮೇರೆಗೆ ಕೋಟೆ ಹುಂಡಿಯ ನಿವಾಸಿ ಯೋಗೇಶ್ (೨೩) ಎಂಬಾತನನ್ನು ಸೋಮವಾರ ಮುಂಜಾನೆ ಪೊಲೀಸರು ಬಂಧಿಸಿದ್ದಾರೆ.

ಭಾನುವಾರ ರಾತ್ರಿ ೮ ಗಂಟೆಯ ವೇಳೆ ಕೋಟೆಹುಂಡಿ ಸಮೀಪದ ಮೈಸೂರು ಮಾನಂದವಾಡಿ ರಸ್ತೆಯಲ್ಲಿ ಸರಕು ಸಾಗಣೆ ಆಟೊದಲ್ಲಿ ಟಿ.ಮಂಜುನಾಥ್, ಆರ್.ಮಂಜುನಾಥ್ ಹಾಗೂ ಮೂರ್ತಿ ಎಂಬುವವರು ಬರುತ್ತಿದ್ದರು. ಈ ವೇಳೆ ಯೋಗೇಶ್ ಪ್ಯಾಸೆಂಜರ್ ಆಟೋದಲ್ಲಿ ಬರುತ್ತಿದ್ದ. ಎರಡೂ ವಾಹನಗಳೂ ಡಿಕ್ಕಿಯಾಗಿ ಪರಸ್ಪರ ಉಜ್ಜಿಕೊಂಡು ಹೋಗಿವೆ.

ಈ ವಿಚಾರಕ್ಕೆ ನಡೆದ ಜಗಳ ವಿಕೋಪಕ್ಕೆ ತೆರಳಿದಾಗ ಕ್ರೋಧಗೊಂಡ ಆರೋಪಿ ಯೋಗೇಶ್, ಚಾಕುವಿನಿಂದ ಟಿ.ಮಂಜುನಾಥ್ ಹಾಗೂ ಆರ್.ಮಂಜುನಾಥ್ ಅವರಿಗೆ ಇರಿದಿದ್ದಾನೆ. ಈ ವೇಳೆ ತಪ್ಪಿಸಿಕೊಂಡ ಮೂರ್ತಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಘಟನೆಯಲ್ಲಿ ಟಿ.ಮಂಜುನಾಥ್ ಸ್ಥಳದಲ್ಲೆ ಮೃತಪಟ್ಟರೆ , ಗಂಭೀರವಾಗಿ ಗಾಯಗೊಂಡಿದ್ದ ಆರ್.ಮಂಜುನಾಥ್‌ನನ್ನು ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು,ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಈ ಬಗ್ಗೆ ಜಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss