Wednesday, August 10, 2022

Latest Posts

ಮೈಸೂರು| ಕಾರ್ಮಿಕ ಕಾಯ್ದೆಗಳನ್ನು ರದ್ದು ಮಾಡಿರುವ ಸುಗ್ರೀವಾಜ್ಞೆಯನ್ನು ಹಿಂಪಡೆಯಲು ಆಗ್ರಹ

ಮೈಸೂರು: ಕಾರ್ಮಿಕ ಕಾಯ್ದೆಗಳನ್ನು ರದ್ದು ಮಾಡಿರುವ ಸುಗ್ರೀವಾಜ್ಞೆಯನ್ನು ಈ ಕೂಡಲೇ ಕೇಂದ್ರ ಸರ್ಕಾರ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ನಗರಪಾಲಿಕೆ, ನಗರ ಸಭೆ ಪುರಸಭೆಗಳ ಪೌರಕಾರ್ಮಿಕ ಮಹಾಸಂಘದ ರಾಜ್ಯಾಧ್ಯಕ್ಷ ನಾರಾಯಣ ಒತ್ತಾಯಿಸಿದರು.

ಶನಿವಾರ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೊರೋನಾ ಲಾಕ್ ಡೌನ್ ಸಂದರ್ಭವನ್ನು ಬಳಸಿಕೊಂಡು ಸುಮಾರು 45 ಪ್ರಮುಖ ಕಾರ್ಮಿಕ ಕಾಯ್ದೆಗಳನ್ನು ರದ್ದು ಮಾಡಿ,  ಕೇವಲ ನಾಲ್ಕು ಕಾಯ್ದೆಗಳನ್ನಾಗಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿದೆ. ಇದರಿಂದಾಗಿ ಸಮಗ್ರ ಕಾರ್ಮಿಕ ಹಕ್ಕುಗಳಿಗೆ, ಹಿತಾಸಕ್ತಿಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಿದರು.

ಕನಿಷ್ಠವೇತನ ಕಾಯ್ದೆ, ವೇತನ ಪಾವತಿ ಕಾಯ್ದೆ,  ಬೋನಸ್ ಪಾವತಿ ಕಾಯ್ದೆ, ಸಮಾನವೇತನ ಕಾಯ್ದೆ ಇತ್ಯಾದಿ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡುವ ಕಾಯ್ದೆಗಳನ್ನು ರದ್ದುಮಾಡುವ ಮೂಲಕ ಕಾರ್ಮಿಕರ ಬದುಕನ್ನು ಬೀದಿಪಾಲು ಮಾಡಿ,  ಭವಿಷ್ಯದಲ್ಲಿ ಸಂಕಷ್ಟಕ್ಕೀಡು ಮಾಡಲು ಕೇಂದ್ರ ಸರ್ಕಾರ ಹೊರಟಿರುವುದು ತೀವ್ರ ಖಂಡನೀಯ ಎಂದರು. ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರು ಅಭದ್ರತೆಯಲ್ಲಿದ್ದು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಹೊಸ ಕಾಯ್ದೆಗಳು ಕಾರ್ಮಿಕರಿಗೆ ಮಾರಕ ಪರಿಣಾಮ ಬೀರಲಿವೆ. ಹಾಗಾಗಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ,  ಜೀವನ ಭದ್ರತೆ, ವೇತನ ಭದ್ರತೆಗಾಗಿ ಒಗ್ಗಟ್ಟಾಗಿ ಹೋರಾಡುವುದು ಅನಿವಾರ್ಯವಾಗಿದೆ ಎಂದರು.

ಕಾರ್ಮಿಕರ ಹಿತಾಸಕ್ತಿಗಾಗಿ ಇದ್ದ ಕಾರ್ಮಿಕ ಕಾಯ್ದೆಗಳನ್ನು ರದ್ದು ಮಾಡಿರುವ ಸುಗ್ರೀವಾಜ್ಞೆಯನ್ನು ಈ ಕೂಡಲೇ ಹಿಂಪಡೆಯಬೇಕು. ಈ ಹಿಂದಿನ ಕಾರ್ಮಿಕ  ಕಾಯ್ದೆಗಳನ್ನು ಮುಂದುವರಿಸಬೇಕು,  ತಪ್ಪಿದಲ್ಲಿ ಕಾರ್ಮಿಕರು, ಕಾರ್ಮಿಕ ಸಂಘಟನೆಗಳು, ಪೌರಕಾರ್ಮಿಕ ಸಂಘಟನೆಗಳು ಒಗ್ಗೂಡಿ ಬೃಹತ್ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಆರ್.ದಾಸು, ಆರ್.ಶಿವ, ಕಾನೂನು ಸಲಹೆಗಾರ ಆರ್.ಲಕ್ಷ್ಮಣ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss