ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ಉದ್ಯಾನದಲ್ಲಿ ಆಡು, ಕುರಿ ಮೇಯಿಸಲು ಹೋದ ಜೇನು ಕುರುಬನ ಮೇಲೆ ದಾಳಿ ನಡೆಸಿ, ಆತನನ್ನು ಕೊಂದು, ದೇಹವನ್ನು ತಿಂದು ಮುಗಿಸಿದ್ದ ಹುಲಿ ಕೊನೆಗೂ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬಿದ್ದಿದೆ.
ಹುಣಸೂರು ತಾಲೂಕಿನ ಹನಗೋಡು ಬಳಿಯ ನೇರಳಕುಪ್ಪೆ ‘ಬಿ’ ಹಾಡಿಯ ಜಗದೀಶ್ (೬೫) ನಾಪತ್ತೆಯಾಗಿದ್ದ. ಈತನ ಪತ್ತೆಗಾಗಿ ಬಲರಾಮ, ಗಣೇಶ ಸಾಕಾನೆಗಳೊಂದಿಗೆ ಆರ್.ಎಫ್.ಒ ಹನುಮಂತರಾಜು ಹಾಗೂ ಸಿಬ್ಬಂದಿಗಳೊoದಿಗೆ ಕೂಂಬಿoಗ್ ನಡೆಸಿದ ವೇಳೆ ಅರಣ್ಯ ವಸತಿ ಗೃಹ ಹತ್ತಿರದ ಹಂದಿಹಳ್ಳದಲ್ಲಿ ಜಗದೀಶರಿಗೆ ಸೇರಿದ ಬಟ್ಟೆ, ಕತ್ತಿ, ಛತ್ರಿ, ಚಪ್ಪಲಿ ಸಿಕ್ಕಿದ್ದು, ಸ್ಥಳದಲ್ಲಿ ರಕ್ತದ ಕಲೆ ಪತ್ತೆಯಾಗಿರುವುದರಿಂದ ಬಹುತೇಕ ಹುಲಿ ಹೊತ್ತೊಯ್ದಿರಬೇಕೆಂಬ ಅನುಮಾನವಿತ್ತು. ಹಾಗಾಗಿ ಕಾರ್ಯಚರಣೆಯನ್ನು ನಡೆಸಿದಾಗ, ಜಗದೀಶನ ತಲೆ, ಕೈಗಳು ಪತ್ತೆಯಾಗಿದ್ದವು. ಆತನ ಇಡೀ ದೇಹವನ್ನು ಹುಲಿ ತಿಂದು ಮುಗಿಸಿತ್ತು. ಈ ಹಿನ್ನಲೆಯಲ್ಲಿ ಹುಲಿಯನ್ನು ಸೆರೆ ಹಿಡಿಯುವುದಕ್ಕಾಗಿ ಸ್ಥಳದಲ್ಲಿ ಬೋನಿಟ್ಟು, ಅದರಲ್ಲಿ ಮಾಂಸವನ್ನು ಇರಿಸಲಾಗಿತ್ತು. ಮಾಂಸವನ್ನು ತಿನ್ನಲು ಬಂದ ೮ ವರ್ಷದ ಗಂಡು ಹುಲಿ ಬೋನಿಗೆ ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಅದನ್ನು ಬೇರೆಡೆಗೆ ಸಾಗಿಸಿದರು.