ಮೈಸೂರು: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದಲ್ಲಿ ರೈತರಿಗೆ ಮಾರಾಟ ಮಾಡುತ್ತಿದ್ದ ರಸಗೊಬ್ಬರ ತೂಕದಲ್ಲಿ ವಂಚಿಸುತ್ತಿದ್ದ ಗ್ರೋಮೋರ್ ಅಗ್ರೋ ಕೇಂದ್ರದ ಮಾಲೀಕನಿಗೆ ಕಾನೂನು ಮಾಪನ ಶಾಸ್ತç ಇಲಾಖೆಯ ಅಧಿಕಾರಿಗಳು ೧.೧೫ ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ಕಳೆದ ಶನಿವಾರ ಅಂಗಡಿಯ ಮಾಲೀಕ ಮಾರಾಟ ಮಾಡಿದ್ದ ರಸಗೊಬ್ಬರ ಮೂಟೆಯ ತೂಕ ನಿಗಧಿತದಿಂದ ಕೆಜಿಗಿಂತ ಬಹಳ ಕಡಿಮೆಯಾಗಿರುವ ಬಗ್ಗೆ ಅನುಮಾನಗೊಂಡ ರೈತರು, ಆ ಅಂಗಡಿಯಲ್ಲಿ ಖರೀದಿಸಿದ್ದ ರಸಗೊಬ್ಬರದ ಮೂಟೆಯನ್ನು ಪುನಃ ಹೊರಗೆ ತೂಗಿದಾಗ ಕೇವಲ ೩೮.೪೦ ಕೆಜಿ ಮಾತ್ರ ಇದ್ದುದು ಕಂಡು ಬಂದಿತ್ತು. ಇದರಿಂದಾಗಿ ರೈತರು ಆಕ್ರೋಶಗೊಂಡು, ತೂಕದಲ್ಲಿ ವಂಚನೆ ಮಾಡುತ್ತಿರುವ ಬಗ್ಗೆ ಕೃಷಿ ಇಲಾಖೆಗೆ ದೂರು ನೀಡಿದ್ದರು.
ದೂರಿನ ಹಿನ್ನಲೆಯಲ್ಲಿ ಕಾನೂನು ಮಾಪನ ಶಾಸ್ತç ಇಲಾಖೆಯ ಅಧಿಕಾರಿ ರಾಜೀವ್ ಹಾಗೂ ಕೃಷಿ ಅಧಿಕಾರಿ ದೀಪಕ್ ಅಂಗಡಿ ಮೇಲೆ ದಾಳಿ ನಡೆಸಿ, ರೈತರ ಸಮ್ಮುಖದಲ್ಲಿ ತೂಕದ ತಪಾಸಣೆ ನಡೆಸಿದಾಗ, ತೂಕದಲ್ಲಿ ವಂಚಿಸುತ್ತಿರುವುದು ಕಂಡು ಬಂದ ಕಾರಣ, ಮಾರಾಟಕ್ಕೆಂದು ಇಟ್ಟಿದ್ದ ೧೫೦ ಮೂಟೆ ಪೊಟ್ಯಾಷ್ ಗೊಬ್ಬರವನ್ನು ವಶಕ್ಕೆ ಪಡೆದಿದ್ದರು. ಅಲ್ಲದೆ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ತೂಕದಲ್ಲಿ ವಂಚನೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಾಲೀಕನಿಗೆ ೧.೧೫ ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ಅಲ್ಲದೇ, ಇಲ್ಲಿ ಗೊಬ್ಬರ ಮಾರಾಟ ಮಾಡದಂತೆ ಮತ್ತು ಇದೇ ಅಂಗಡಿ ಮಾಲೀಕನ ಚಾಮರಾಜನಗರ ವೃತ್ತದಲ್ಲಿರುವ ಇನ್ನೊಂದು ಅಂಗಡಿಯಲ್ಲಿಯೂ ಗೊಬ್ಬರ ಮಾರಾಟ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ.