ಮೈಸೂರು: ಗೌರಿ-ಗಣೇಶ ಹಬ್ಬದ ಹಿನ್ನಲೆಯಲ್ಲಿ ಮಹಾಮಾರಿ ಕೊರೋನಾ ಸೋಂಕು ಮತ್ತಷ್ಟು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿರುವ ಹೂವಿನ ಅಂಗಡಿಗಳನ್ನು ನಗರದ ರೈಲು ನಿಲ್ದಾಣದ ಬಳಿಯಿರುವ ಜೆ.ಕೆ.ಮೈದಾನಕ್ಕೆ ಸ್ಥಳಾಂತರಿಸಲು ಮೈಸೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.
ದೇವರಾಜ ಮಾರುಕಟ್ಟೆಯಲ್ಲಿ ಅತಿ ಹೆಚ್ಚಾಗಿ ಜನರು ಹೂವು, ಹಣ್ಣು, ತರಕಾರಿ ಖರೀದಿಸುವುದಕ್ಕೆ ಬರುವ ಕಾರಣ, ಭಾರೀ ಜನಸಂದಣಿ ಏರ್ಪಟ್ಟು, ಕೊರೋನಾ ವೈರಾಣು ಸೋಂಕು ಹರಡುವಿಕೆಗೆ ಕಾರಣವಾಗುತ್ತದೆ ಎಂಬ ಆತಂಕದಿ0ದ ಕಳೆದ ವರಮಹಾಲಕ್ಷಿ ಹಬ್ಬದ ಮುನ್ನಾ ಮೂರು ದಿನಗಳ ಕಾಲ ಹೂವಿನ ಅಂಗಡಿಗಳನ್ನು ಜೆ.ಕೆ.ಮೈದಾನಕ್ಕೆ ಸ್ಥಳಾಂತರ ಮಾಡಲಾಗಿತ್ತು.
ಈ ಮೈದಾನವು ಬಹಳ ವಿಶಾಲವಾಗಿರುವ ಕಾರಣ, ಜನರು, ವ್ಯಾಪಾರಿಗಳ ನಡುವೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಅನುಕೂಲವಾಗಿತ್ತು. ಇದೀಗ ಗೌರಿ ಗಣೇಶ ಹಬ್ಬ ಬರುತ್ತಿರುವ ಕಾರಣ ಜನ ಸಂದಣಿಯನ್ನು ತಪ್ಪಿಸಲು ಮತ್ತೆ ಹೂವಿನ ಅಂಗಡಿಗಳನ್ನು ಜೆ.ಕೆ.ಮೈದಾನಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ನಗರಪಾಲಿಕೆಯ ಆಯುಕ್ತ ಗುರುದತ್ ಹೆಗಡೆ ತಿಳಿಸಿದ್ದಾರೆ. ಅಲ್ಲದೆ ಈ ಮೈದಾನದಲ್ಲಿಯೇ ಶಾಶ್ವತವಾಗಿ ಹೂವಿನ ಮಾರುಕಟ್ಟೆಯನ್ನು ನಡೆಸಲು ಕೂಡ ಚಿಂತಿಸಿರುವುದಾಗಿ ಹೇಳಿದ್ದಾರೆ.