Thursday, July 7, 2022

Latest Posts

ಮೈಸೂರು| ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಕಣ್ಮನ ಸೆಳೆಯುತ್ತಿರುವ ವಿಶೇಷ ಕೈಮಗ್ಗ ಮೇಳ

ಹೊಸದಿಗಂತ ವರದಿ,ಮೈಸೂರು:

ನಗರದ ಹೆಬ್ಬಾಳದ ರಿಂಗ್ ರಸ್ತೆಯಲ್ಲಿರುವ ಜೆಎಸ್‌ಎಸ್ ಅರ್ಬನ್ ಹಾತ್‌ನಲ್ಲಿ ಅದು ವಿಶೇಷ ಕೈಮಗ್ಗ ಮೇಳ ನಡೆಯುತ್ತಿದೆ.`ಸಂಸ್ಕೃತಿ -2020′ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಗುಜರಾತ್ ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾದ ಇಂಡಸ್ಟ್ರಿಯಲ್ ಎಕ್ಸ್ಟೆನ್ಷನ್ ಕಾಟೇಜ್ (ಇಂಡೆಕ್ಸ್ಟ್ ಸ್) ಸಹಯೋಗದಲ್ಲಿ ಗುಜರಾತ್ ಹ್ಯಾಂಡಿ ಕ್ರಾಫ್ಟ್ ನ ಉತ್ಸವವನ್ನು ನಡೆಸಲಾಗುತ್ತಿದೆ.

ಈ ಕೈಮಗ್ಗ ಮೇಳದಲ್ಲಿ ಜಮ್ಮು-ಕಾಶ್ಮೀರ, ದೆಹಲಿ, ರಾಜಸ್ತಾನ, ಗುಜರಾತ್, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಹರಿಯಾಣ, ಬಿಹಾರ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಹಾಗೂ ಕರ್ನಾಟಕದ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ಗದಗ, ಬಾಗಲಕೋಟೆ, ಕಲಬುರ್ಗಿ ಮತ್ತು ಇಳಕಲ್ ಪ್ರದೇಶದ ಕೈಮಗ್ಗ ನೇಕಾರ ಸಹಕಾರಿ ಸಂಘಗಳು ಭಾಗವಹಿಸುತ್ತಿವೆ.

ಅಲ್ಲಿನ ಕೈಮಗ್ಗ ನೇಕಾರರು ತಯಾರಿಸಿದ ರೇಷ್ಮೆ, ಹತ್ತಿ ಮತ್ತು ಉಣ್ಣೆ ಹಾಗೂ ವಿವಿಧ ಮಿಶ್ರಿತ ನೂಲುಗಳಿಂದ ತಯಾರಿಸಿರುವ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ.

ಗುಜರಾತ್ ಹ್ಯಾಂಡಿ ಕ್ರಾಫ್ಟ್ ಉತ್ಸವ: ಈ ಉತಸ್ವದಲ್ಲಿ ಗುಜರಾತ್ ರಾಜ್ಯದ ಸುಮಾರು 45 ಕುಶಲಕರ್ಮಿಗಳು ಭಾಗವಹಿಸಿ ಕಲಾ ಪ್ರೌಢಿಮೆಯನ್ನು ಅನಾವರಣಗೊಳಿಸುವರು. ಅಲ್ಲಿನ ಪಟೋಲ ಸೀರೆಗಳು, ಬಾಂದಿನಿ ಸೀರೆಗಳು, ಕಸೂತಿ ಮಾಡಿದ ಬೆಡ್ ಶೀಟ್‌ಗಳು, ಟವಲ್‌ಗಳು, ಕುಶನ್ ಕವರ್‌ಗಳು, ಪರಿಸರ ಸ್ನೇಹಿ ಆಭರಣಗಳು, ಡ್ರೆಸ್ ಮೆಟೀರಿಯಲ್‌ಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಬೀಡ್ ವರ್ಕ್, ಮೆಟಲ್ ವರ್ಕ್, ಕುರ್ತಿಗಳು, ಚನಿಯಾ ಚೋಲಿ, ಬಾಂದಿನಿ ಹಾಗೂ ಆಕರ್ಷಕ ಕರಕುಶಲ ಹಾಗೂ ಕೈಮಗ್ಗ ಉತ್ಪನ್ನಗಳನ್ನು ಕಣ್ತುಂಬಿಸಿಕೊಳ್ಳಲು ಸಾರ್ವಜನಿಕರಿಗೆ ಅವಕಾಶವೂ ಇದೆ. ಮೆಚ್ಚುಗೆಯಾದ ಕರಕುಶಲ ವಸ್ತುಗಳನ್ನು ಖರೀದಿಸಿ ಕುಶಲಕರ್ಮಿಗಳ ಬದುಕಿಗೆ ನೆರವಾಗಲೂ ಅವಕಾಶ ಇದೆ.

ಕತೆ ಹೇಳುವ ಸೀರೆಗಳು: ವಾರಾಣಸಿಯ ಮೊಹಮ್ಮದ್ ಸ್ವಾಲೆ ಅನ್ಸಾರಿ ಅವರ ಮಳಿಗೆಯಲ್ಲಿ ಕತೆ ಹೇಳುವ ಸೀರೆಗಳಿವೆ. ಅವರ ಮಳಿಗೆಗಳಲ್ಲಿ ಇರುವ ಪ್ರತಿ ಸೀರೆಯಲ್ಲೂ ವಿವಿಧ ಸಂದರ್ಭಗಳನ್ನು ಚಿತ್ರಿಸಿರುವ ಚಿತ್ತಾರಗಳಿವೆ. ಅವೆಲ್ಲದರ ಹಿಂದೆ ಒಂದೊಂದು ಕಥಾನಕಗಳಿವೆ. ವಿವಿಧ ಸನ್ನಿವೇಶಗಳನ್ನು ಕಲೆಯ ಮಾಧ್ಯಮದ ಮೂಲಕ ಸೀರೆಗಳಲ್ಲಿ ಚಿತ್ರಿಸಲಾಗಿದೆ. ವನದಲ್ಲಿ ಕುಣಿಯುವ ನವಿಲುಗಳು, ಗಿಳಿಗಳು ಲಾಸ್ಯವನ್ನೂ ಚಿತ್ರಿಸಿದ್ದಾರೆ.

ಪಿತಾಂಬರಿ, ಸೀತಾಂಬರಿ, ನೀಲಾಂಬರಿ ಹೀಗೆ ವಿಧವಿಧವಾದ ಹೆಸರಿನ, ವಿಶಿಷ್ಟ ಸೀರೆಗಳ ಪ್ರಪಂಚ ಅವರ ಮಳಿಗೆಯಲ್ಲಿ ಅನಾವರಣಗೊಂಡಿದೆ. ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ಹಲವು ಕುಶಲಕರ್ಮಿಗಳು ಈ ಬಾರಿಯ ಮೇಳದಲ್ಲಿ ಭಾಗವಹಿಸಿದ್ದಾರೆ. ಅವರಲ್ಲಿರುವ ಪ್ರತಿ ಉತ್ಪನ್ನಗಳೂ ವಿಶಿಷ್ಟ, ಆಕರ್ಷಣೀಯವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss