ಮೈಸೂರು: ರಾಜ್ಯದಲ್ಲಿ ಬೇರು ಬಿಟ್ಟಿರುವ ಗಾಂಜಾ, ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಗಂಧಧ ಗುಡಿ ಫೌಂಡೇಶನ್ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಗಾಂಧಿವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ಧರಣಿ ನಡೆಸಿ, ನಾನಾ ಘೋಷಣೆಗಳನ್ನು ಕೂಗಿದರು. ರಾಜ್ಯದಲ್ಲಿ ಡ್ರಗ್ ದಂಧೆ ನಡೆಯುತ್ತಿರುವುದು, ಅದರಲ್ಲಿ ಪ್ರಭಾವಿಗಳೇ ಭಾಗಿಯಾಗಿರುವ ವಿಚಾರಗಳು ಹೊರಗೆ ಬರುತ್ತಿದೆ. ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಸಿಸಿಬಿ ಪೊಲೀಸರು ನಟಿಯರಾದ ರಾಗಿಣಿ ಮತ್ತು ಸಂಜನಾ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇವರಲ್ಲದೇ ಇನ್ನೂ ಹಲವಾರು ಪ್ರಭಾವಿ ವ್ಯಕ್ತಿಗಳ ಮಕ್ಕಳು, ಉದ್ಯಮಿಗಳ ಮಕ್ಕಳು ಹಾಗೂ ದೊಡ್ಡ ದೊಡ್ಡ ನಟ-ನಟಿಯರ ಕೈವಾಡವಿರುವ ಸಾಧ್ಯತೆ ಇದೆ. ಅವರು ಯಾರಾದರೂ ಕೂಡಲೇ ಬಂಧಿಸಬೇಕು. ಕಠಿಣ ಕ್ರಮ ಜರುಗಿಸಿ, ಶಿಕ್ಷೆ ವಿಧಿಸಬೇಕು, ಆ ಮೂಲಕ ಗಾಂಜಾ, ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತೊಗೆಯುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷರಾದ ಆರ್ಯನ್, ಗೌರವಾಧ್ಯಕ್ಷರಾದ ಸುಧೀಂದ್ರ ಮಿಂಚು, ರಾಜ್ಯ ಉಪಾಧ್ಯಕ್ಷರಾದ ಮನೋಹರ್, ರಾಜ್ಯ ಕಾರ್ಯದರ್ಶಿಗಳಾದ ಹೇಮಂತ್ ಬಿ.ವಿ, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಭರತ್, ನಿತಿನ್, ಸಂಜು, ನಂದೀಶ್, ಸಾದತ್, ಕುಮಾರ್, ಧನಂಜಯ್ ಪಾಲ್ಗೊಂಡಿದ್ದರು