ಮೈಸೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಾದ್ಯಾಂತ ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಗಾಳಿಗೆ ಜಮೀನಿನಲ್ಲಿ ಬೆಳೆದಿದ್ದ ನೂರಾರು ಎಕರೆ ಮೆಕ್ಕೆಜೋಳದ ಬೆಳೆ ನಾಶವಾಗಿ, ರೈತರು ತೀವ್ರ ಸಂಕಷ್ಟಗೀಡಾಗಿದ್ದಾರೆ. ಪಿರಿಯಾಪಟ್ಟಣ ತಾಲೂಕಿನಾದ್ಯಂತ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮುಂಗಾರು ಮಳೆಗಾಳಿಯಿಂದ ಮೂರು ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಜೋಳ ತೆನೆ ಸಮೇತ ನೆಲಕ್ಕುರುಳಿ ಕೊಳೆಯುವಂತಾಗಿದೆ.
ರೈತ ಒಂದು ಎಕರೆಯಲ್ಲಿ ಜೋಳ ಬೆಳೆಯಲು ಸುಮಾರು ರೂ. ೨೫ ದಿಂದ ೩೦ ಸಾವಿರ ರೂಪಾಯಿಗಳ ಖರ್ಚು ಮಾಡುತ್ತಿದ್ದು, ಉತ್ತಮ ಬೆಲೆ ಸಿಕ್ಕರೆ ಪ್ರತಿ ಎಕರೆಗೆ ೫೦ ರಿಂದ ೬೦ ಸಾವಿರದ ಆದಾಯ ನಿರೀಕ್ಷೆ ಮಾಡಬಹುದಿತ್ತು. ಆದರೆ, ಇನ್ನೊಂದು ತಿಂಗಳಲ್ಲಿ ಕಟಾಗಿವೆ ಬರುತ್ತಿದ್ದ ಜೋಳದ ಬೆಳೆ, ಮಳೆಯಿಂದ ನಾಶವಾಗಿರುವುದು ರೈತರ ಸಾಲ ಮತ್ತಿತರೆ ಸಂಕಷ್ಟಗಳ ನಡುವೆಯೂ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈಗಾಗಲೆ ಸರ್ಕಾರ ಕೊರೋನಾದಿಂದ ಸಂಕಷ್ಟಕ್ಕಿಡಾದ ರೈತರಿಗೆ ಐದು ಸಾವಿರ ರೂ.ಗಳ ಪರಿಹಾರ ನೀಡಿದ್ದರೂ, ಅದು ಸಾಕಷ್ಟು ರೈತರಿಗೆ ತಲುಪಿಲ್ಲ. ಈ ನಡುವೆಯೂ ಸಾಲ,ಸೋಲ ಮಾಡಿ, ಬಿತ್ತನೆ ಕಾರ್ಯ ಮಾಡಿದ್ದ ಜೋಳದ ಬೆಳೆ, ಕೈಗೆ ಸಿಗಬೇಕೆನ್ನುವ ಸಮಯದಲ್ಲಿ ಮಳೆಯಿಂದ ನಾಶವಾಗುತ್ತಿದೆ. ಕೊರೋನಾ ಪರಿಣಾಮದಿಂದ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ವ್ಯಾಪಾರವೂ ಕೂಡ ಮಾಡಲಾಗದೆ, ಈ ಬಾರಿ ತಂಬಾಕಿನಿ೦ದಲೂ ಉತ್ತಮ ಬೆಲೆ ಸಿಗದೆ ಕಂಗೆಟ್ಟ ರೈತರು, ಶುಂಠಿ ಬೆಳೆಯಲು ಉತ್ಸಾಹ ತೋರಿದ್ದು, ಅದು ಕೂಡ ಈ ಬಾರಿ ನಿರೀಕ್ಷೆ ಮಾಡಿದಷ್ಟು ಬೆಲೆಯು ಇಲ್ಲ ಹಾಗೂ ಶುಂಠಿ ಬೆಳೆಯು ಹಲವಾರು ಪ್ರದೇಶದಲ್ಲಿ ರೋಗಕ್ಕೆ ತುತ್ತಾಗುತ್ತಿದೆ.
ಇದೇ ರೀತಿ ಪ್ರತಿ ವರ್ಷವೂ ರೈತ ಪ್ರಕೃತಿ ವೈಪರೀತ್ಯದಿಂದಾಗುವ ಏರುಪೇರಿಗೆ ನಗುಲುತ್ತಿದ್ದು, ಸರ್ಕಾರ ಎಲ್ಲಾ ವರ್ಗಾದ ಜನರಿಗೆ ಪ್ಯಾಕೇಜ್ ಘೋಷಿಸುವಂತೆ ರೈತರಿಗೂ ಕೂಡ ಪ್ಯಾಕೇಜ್ ಘೋಷಿಸಬೇಕು, ರೈತ ತೊಂದರೆಕ್ಕಿಡಾದಲ್ಲಿ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.
ಈಗಾಗಲೇ ತೀವ್ರ ಮಳೆಗಾಳಿಗೆ ತಾಲ್ಲೂಕಿನಾದ್ಯಾಂತ ಬೆಳೆದಿದ್ದ ಸಾವಿರಾರು ಎಕರೆ ಮುಸುಕಿನಜೋಳ ನೆಲಕ್ಕಚ್ಚಿರುವ ಕಾರಣ ನಾನೇ ಸ್ಥಳಕೆಕ ಭೇಟಿ ರೈತರಿಂದ ಮಾಹಿತಿಯನ್ನು ಸಂಗ್ರಹಿಸಿದ್ದೇನೆ. ಸರ್ಕಾರ ಪ್ರಕೃತಿ ವಿರೋಪದಿಂದ ಹಾನಿಗೊಳಗಾದ ಕೃಷಿ ಬೆಳೆಗಳಿಗೆ ಪರಿಹಾರ ನೀಡುವ ಸಂಬ೦ಧ ಕಂದಾಯ ಇಲಾಖೆ ಸಹಾಯದೊಂದಿಗೆ ಕೃಷಿ ಇಲಾಖೆ ಜಂಟಿ ಸರ್ವೆ ಕಾರ್ಯ ನಡೆಸಿ ವರದಿಯಲ್ಲಿ ಸರ್ಕಾರಕ್ಕೆ ನೀಡಬೇಕಾಗಿದ್ದು ಬೆಳೆನಷ್ಟ ಹೊಂದಿರುವ ರೈತರು ಅಗತ್ಯ ದಾಖಲೆಗಳೊಂದಿಗೆ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಕಂದಾಯ ಇಲಾಖೆ ನಾಡಕಛೇರಿಗೆ ಅರ್ಜಿಗಳನ್ನು ಸಲ್ಲಿಸಲು ತಿಳಿಸಲಾಗಿದೆ.
ಶಿವಕುಮಾರ್,ಸಹಾಯಕ ಕೃಷಿ ನಿರ್ದೇಶಕರು, ಪಿರಿಯಾಪಟ್ಟಣ.
ರೈತರು ಈ ಬಾರಿ ಸಾಕಷ್ಟು ಕಷ್ಟಗಳ ನಡುವೆ ಜೋಳವನ್ನು ಬೆಳೆದಿದ್ದು ಪ್ರಾರಂಭದಲ್ಲಿ ಈ ಮೆಕ್ಕೆಜೋಳಕ್ಕೆ ಸೈನಿಕ ಹುಳು ಎಂಬ ಕೀಟ ಆವರಿಸಿ, ರೈತರನ್ನು ಸಂಕಷ್ಟಕ್ಕೀಡುಮಾಡಿತ್ತು. ಇದರ ನಡುವೆ ಅತೀವೃಷ್ಟಿ ಸಂಭವಿಸಿ, ಬೆಳೆದಿದ್ದ ಜೋಳವೆಲ್ಲ ಮಳೆಯ ಆರ್ಭಟಕ್ಕೆ ಸಿಲುಕಿ ನೆಲ ಕಚ್ಚಿದೆ. ಈ ಸಂದರ್ಭದಲ್ಲಿ ಸರ್ಕಾರ ನೀಡುವ ಪರಿಹಾರ ಧನ ರೈತರಿಗೆ ಏನೇನು ಸಾಲದು ಇನ್ನು ಹೆಚ್ಚಿನ ಸಹಾಯಧನ ಬಿಡುಗಡೆ ಮಾಡಬೇಕು.
ಶಿವರಾಮೇಗೌಡ, ರೈತ , ಸತ್ಯಗಾಲ ಗ್ರಾಮ, ಪಿರಿಯಾಪಟ್ಟಣ ತಾಲೂಕು