Sunday, August 14, 2022

Latest Posts

ಮೈಸೂರು| ಮೈಮುಲ್ ಹುದ್ದೆಯ ನೇಮಕಾತಿ ಅಕ್ರಮದ ಆರೋಪ, ಆಡಿಯೋ ಬಿಡುಗಡೆ ಮಾಡಿದ ಶಾಸಕ ಸಾ.ರಾ.ಮಹೇಶ್

ಮೈಸೂರು: ಮೈಸೂರು ಹಾಲು ಒಕ್ಕೂಟದ ಹುದ್ದೆಗಳಿಗೆ ಮಾಡಿಕೊಳ್ಳುತ್ತಿರುವ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದ್ದು, ಯಾರಿಗೆ ಹೆಚ್ಚು ಹಣ ನೀಡುತ್ತಾರೋ ಅವರಿಗೆ ಹುದ್ದೆ ನೀಡಲಾಗುತ್ತಿದೆ ಎಂದು ಮಾಜಿ ಸಚಿವರಾದ ಶಾಸಕ ಸಾ.ರಾ. ಮಹೇಶ್ ಆರೋಪಿಸಿದರು.
ಶುಕ್ರವಾರ ಮೈಸೂರಿನಲ್ಲಿರುವ ತಮ್ಮ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮೈಮುಲ್ ಹುದ್ದೆಗಳು ಹಣಕ್ಕೆ ಮಾರಾಟವಾಗಿರುವ ಬಗ್ಗೆ ಆಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಮೈಮುಲ್ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿ ಹಾಗೂ ಆಯ್ಕೆಯಾಗದ ಅಭ್ಯರ್ಥಿಗಳ ನಡುವಿನ ಸಂಭಾಷಣೆ ಇದಾಗಿದ್ದು, ೧೮ ಸಾವಿರ ಜನ ಪರೀಕ್ಷೆ ಬರೆದರೆ ೨೦೦ ಮಂದಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರ ಅಕ್ಕನ ಮಗ,ತಂಗಿಯ ಮಗನೆ ಬುದ್ದಿವಂತನೇ? ಪರೀಕ್ಷೆ ಮುಗಿದು ಇಷ್ಟು ದಿನವಾದರೂ ಕೀ ಉತ್ತರಗಳನ್ನ ಏತಕ್ಕೆ ಬಿಡುಗಡೆ ಮಾಡಿಲ್ಲ ಎಂದರು. ಇನ್ನು ಲಾಕ್‌ಡೌನ್ ಜಾರಿಯಲ್ಲಿದ್ದಾಗ ಯಾವುದೇ ಹುದ್ದೆಗಳ ಸಂದರ್ಶನ ನಡೆಸದಂತೆ ಸರ್ಕಾರವೇ ಆದೇಶ ನೀಡಿದೆ. ಆದರೆ ಇಂತಹ ಸಂದರ್ಭದಲ್ಲೂ ತರಾತುರಿಯಲ್ಲಿ ಸಂದರ್ಶನ ನಡೆಸುವ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದರು.
ಬಿಡುಗಡೆ ಮಾಡಿರುವ ಈ ಆಡಿಯೋ ಆಧಾರದ ಮೇಲೆ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ಆಗಬೇಕು. ಇಡೀ ಆಯ್ಕೆ ಪ್ರಕ್ರಿಯೆಯನ್ನು ರದ್ದು ಮಾಡಬೇಕು. ಹೊಸದಾಗಿ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ಮೈಮುಲ್ ನೇಮಕಾತಿ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಈ ನಡುವೆಯೇ ಸಂದರ್ಶನ ನಡೆಸಲು ಸಿದ್ಧತೆ ನಡೆದಿದೆ. ಆಕಸ್ಮಾತ್ ಆಯ್ಕೆ ಪ್ರಕ್ರಿಯೆ ನಿಲ್ಲದಿದ್ದಲ್ಲಿ ಮೈಸೂರು ಹಾಲು ಒಕ್ಕೂಟದ ಮುಂದೆ ಮೇ ೧೯ರಂದು ಮಾಜಿ ಸಚಿವ ಹೆಚ್. ಡಿ. ರೇವಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದರು.
ಮೈಮುಲ್‌ನಲ್ಲಿ ಅವರ ಆಪ್ತರಿಗೆ ಕೆಲಸ ಕೊಡಿಸದ ದ್ವೇಷಕ್ಕೆ ಸುಳ್ಳು ಆರೋಪ ಮಾಡುತ್ತಿದ್ದಾರೆ
*ಶಾಸಕ ಸಾ.ರಾ.ಮಹೇಶ್ ಆರೋಪಕ್ಕೆ ಮೈಮುಲ್ ಅಧ್ಯಕ್ಷ ಸಿದ್ದೇಗೌಡ ತಿರುಗೇಟು
ಮೈಸೂರು: ಮೈಮುಲ್ ನಲ್ಲಿ ತಮ್ಮ ಆಪ್ತರಿಬ್ಬರಿಗೆ ಕೆಲಸ ಕೊಡಿಸುವಂತೆ ಶಾಸಕ ಸಾ.ರಾ. ಮಹೇಶ್ ಒತ್ತಾಯ ಮಾಡಿದ್ದರು, ಹುದ್ದೆಯ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳಿಸಲಿ ಎಂದು ಹೇಳಿದ್ದೆ. ಹಾಗಾಗಿ ತಮ್ಮ ಆಪ್ತರಿಗೆ ಹುದ್ದೆ ಕೊಡಿಸಿಲ್ಲ ಎಂಬ ದ್ವೇಷಕ್ಕೆ ಶಾಸಕ ಸಾ.ರಾ. ಮಹೇಶ್ ಈ ರೀತಿಯ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮೈಮುಲ್ ಅಧ್ಯಕ್ಷ ಸಿದ್ದೇಗೌಡ ತಿರುಗೇಟು ನೀಡಿದ್ದಾರೆ.
ಮೈಮುಲ್ ನಲ್ಲಿ ನೇಮಕಾತಿ ಸಂಬ೦ಧ ಅಕ್ರಮ ನಡೆದಿದೆ ಎಂದು ಶಾಸಕ ಸಾ.ರಾ.ಮಹೇಶ್ ಮಾಡಿರುವ ಆರೋಪಕ್ಕೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಮೈಮುಲ್ ನಲ್ಲಿ ತಮ್ಮ ಆಪ್ತರಿಬ್ಬರಿಗೆ ಕೆಲಸ ಕೊಡಿಸುವಂತೆ ಶಾಸಕ ಸಾ.ರಾ. ಮಹೇಶ್ ಒತ್ತಾಯ ಮಾಡಿದ್ದರು. ಆಗ ನಾನು, ಕೆಲಸ ಕೊಡುವುದಕ್ಕೆ ನಾನ್ಯಾರು, ಹುದ್ದೆಯ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳಿಸಲಿ, ಆಗ ಕೆಲಸ ತಾನಾಗಿಯೇ ಸಿಗುತ್ತೇ ಎಂದು ಅವರಿಗೆ ತಿಳಿಸಿದ್ದೆ. ಆದರೆ ಈಗ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಮಾಡಿರುವ ಆರೋಪ ಹಾಗೂ ಈ ಕುರಿತು ಬಿಡುಗಡೆ ಮಾಡಿರುವ ಆಡಿಯೋ ಸಂಪೂರ್ಣ ಸುಳ್ಳು. ಇದನ್ನು ಅವರೇ ಸೃಷ್ಠಿಸಿರೋ ಆಡಿಯೋ ಬಿಡುಗಡೆ ಮಾಡಿದ್ದಾರೆ. ಆದ್ದರಿಂದ ಸಾ.ರಾ.ಮಹೇಶ್ ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು ಎಂದರು.
ಶಾಸಕ ಸಾ.ರಾ.ಮಹೇಶ್ ಪ್ರಸ್ತಾಪಿಸಿರುವ ವ್ಯಕ್ತಿಗಳ ಪೈಕಿ ಮನೋಜ್ ಕುಮಾರ್ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾನೆ. ಆದರೆ ಈ ಶಿವಣ್ಣ ಯಾರೆಂದು ನನಗೆ ಗೊತ್ತೇ ಇಲ್ಲ. ಒಂದು ಕೋಟಿಗೆ ಸೊನ್ನೆ ಎಷ್ಟು ಎಂಬುವುದೇ ನನಗೆ ಗೊತ್ತಿಲ್ಲ. ಅಂತಹದ್ದರಲ್ಲಿ ನಾನು ಕೋಟಿ ವ್ಯವಹಾರ ಮಾಡುವುದಕ್ಕೆ ಆಗುತ್ತಾ?. ನನ್ನ ಹೆಸರನ್ನ ಕೆಡಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಯಾಕೇಂದರೆ ಅಂಥ ನೀಚ ಕೆಲಸಗಳನ್ನ ನಾನು ಮಾಡುವುದಿಲ್ಲ. ನಮ್ಮ ವಂಶವೇ ಹುಟ್ಟು ರಾಜಕೀಯ ಎಂದು ಸಾ.ರಾ.ಮಹೇಶ್ ವಿರುದ್ಧ ಹರಿಹಾಯ್ದರು.
ಮಾಜಿ ಸಚಿವ, ಶಾಸಕ ಜಿ.ಟಿ. ದೇವೇಗೌಡರನ್ನು ಯಾರು ಏನು ಮಾಡಲಾಗದು. ಅವರನ್ನ ರಾಜಕೀಯವಾಗಿ ತುಳಿಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅವರನ್ನ ತುಳಿಯುತ್ತೇವೆ ಎಂದವರು ಇಂದು ಮಟ್ಟಾ ಆಗಿದ್ದಾರೆ. ಅವರ ಉದ್ದ-ಆಳವನ್ನ ಕಂಡುಹಿಡಿಯುವುದಕ್ಕೆ ಯಾರಿಂದಲೂ ಆಗಲ್ಲ ಎಂದು ತಮ್ಮ ರಾಜಕೀಯ ಗುರು ಜಿ.ಟಿ.ದೇವೇಗೌಡರ ಪರ ಮೈಮುಲ್ ಅಧ್ಯಕ್ಷ ಸಿದ್ದೇಗೌಡ ಬ್ಯಾಟಿಂಗ್ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss