ಮೈಸೂರು : ದೇಶದ ಮಹಾನಗರಗಳಲ್ಲಿ ಮಾತ್ರ ಇದ್ದ ಮೊಬೈಲ್ ಲ್ಯಾಬ್ ವಾಹನ ಇದೀಗ ಅರಮನೆ ನಗರಿ ಮೈಸೂರಿಗೂ ಬಂದಿದೆ. ಲ್ಯಾಬ್ ಆನ್ ವ್ಹೀಲ್ ಎಂಬ ಹೆಸರಿನ ಸಂಚಾರಿ ಲ್ಯಾಬ್ಗೆ ಗುರುವಾರ ಸಂಜೆ ಚಾಲನೆ ನೀಡಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಂಚಾರಿ ಲ್ಯಾಬ್ಗೆ ಹಸಿರು ನಿಶಾನೆ ತೋರಿಸುವ ಮೂಲಕ ಅದರ ಕಾರ್ಯಚರಣೆಗೆ ಚಾಲನೆ ನೀಡಿದರು.
ಮೈಸೂರಿನ ಆಟೋಮೋಟಿವ್ ಎಕ್ಸೆಲ್ ಕಂಪನಿಯು ಸುಮಾರು ೮೦ ಲಕ್ಷ ರೂಪಾಯಿ ವೆಚ್ಚದಲ್ಲಿ ಈ ವಾಹನವನ್ನು ಸಿದ್ಧಪಡಿಸಿದ್ದು, ಮೈಸೂರಿನ ಸಾರ್ವಜನಿಕರ ಸೇವೆಗೆ ಅರ್ಪಿಸಿದೆ. ಕೊರೋನಾ ವೈರಾಣು ಸೇರಿದಂತೆ, ಅಣುಜೀವಿಗಳು, ವೈರಾಣುಗಳು ಮತ್ತು ಶಿಲೀಂಧ್ರಗಳಿoದ ಹರಡುವ ರೋಗಗಳ ಪತ್ತೆಗೆ ಅನುಕೂಲವಾಗುವ ಈ ಸಂಚಾರಿ ಪ್ರಯೋಗಾಲಯವನ್ನು ಕನ್ನಡಿಗ ಉದ್ಯಮಿಗಳು ಸಿದ್ಧಪಡಿಸಿದ್ದಾರೆ.
ಈ ಸಂಚಾರಿ ಪ್ರಯೋಗಾಲಯ ಗಾಲಿ ಮೇಲೆ ರೋಗಾಣು ಪತ್ತೆ ಮಾಡುವುದಾಗಿದೆ. ಗ್ರಾಮೀಣ ಪ್ರದೇಶದ ಜನರು ಮತ್ತು ರೋಗಪರೀಕ್ಷೆ ಮಾಡುವ ವ್ಯವಸ್ಥೆ ಇಲ್ಲದ ಪ್ರದೇಶಗಳ ಮಂದಿಗೆ ಈ ಲ್ಯಾಬ್ ವರದಾನವಾಗಲಿದೆ. ವೈದ್ಯರು, ಎಂಜಿನಿಯರ್ಗಳು ಹಾಗೂ ಉದ್ಯಮಶೀಲರ ಜಂಟಿ ಕೊಡುಗೆ ಇದಾಗಿದೆ. ರೋಗಪರೀಕ್ಷೆಯ ವ್ಯವಸ್ಥೆಗಳಲ್ಲದೇ ಜಿಲ್ಲೆ, ತಾಲೂಕು ಕೇಂದ್ರಗಳಿಗೆ ಇದನ್ನು ಒದಗಿಸುವ ಇರಾದೆ ಸಂಸ್ಥೆಗಿದೆ. ಈ ಪ್ರಯೋಗಾಲಯವನ್ನು ಜಿಲ್ಲಾ ಕೇಂದ್ರಗಳಾಗಲಿ, ಇತರ ಜಾಗಗಳಿರಲಿ, ಬೇಕಾದ ಜಾಗಕ್ಕೆ, ಜೀಪ್ ಇಲ್ಲವೇ ಟ್ರಾಕ್ಟರ್ಗಳ ಮೂಲಕ ಎಳೆದುಕೊಂಡು ಹೋಗಲು ಸಾಧ್ಯವಾಗುವಂತೆ ಅತ್ಯಾಧುನಿಕ ಟ್ರೆಲರ್ಗಳ ಮೇಲೆ ಈ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಈ ಸಂಚಾರಿ ಪ್ರಯೋಗಾಲಯದಿಂದ ಜನರು ತಮ್ಮ ಸ್ಥಳದಲ್ಲಿಯೇ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ಕೆಲವೇ ನಿಮಿಷಗಳಲ್ಲಿ ವರದಿಯನ್ನು ಪಡೆಯಬಹುದಾಗಿದೆ. ಮೈಸೂರು ನಗರ ಹಾಗೂ ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಹೆಚ್ಚು, ಹೆಚ್ಚು ಟೆಸ್ಟ್ಗಳನ್ನು ಮಾಡುವ ಪ್ರಯತ್ನ ನಡೆಸಿ, ಆ ಮೂಲಕ ಸೋಂಕಿತರನ್ನು ಪತ್ತೆ ಹಚ್ಚಿ, ಅವರನ್ನು ಚಿಕಿತ್ಸೆಗೆ ದಾಖಲಿಸುವ ಮೂಲಕ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡಲು ಶ್ರಮಿಸುತ್ತಿರುವ ಜಿಲ್ಲಾಡಳಿತಕ್ಕೆ ಈ ಸಂಚಾರಿ ಕೋವಿಡ್ ಲ್ಯಾಬ್ ಸಹಕಾರಿಯಾಗಲಿದೆ.