Sunday, August 14, 2022

Latest Posts

ಮೈಸೂರು ವಿಶ್ವವಿದ್ಯಾನಿಲಯದ ಬೋಧಕ ಬ್ಯಾಕ್‍ಲಾಗ್ ಹುದ್ದೆಗೆ ದೊರಕಿದ ಅನುಮೋದನೆ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿಯ ಮೂರನೇ ಸಾಮಾನ್ಯ ಸಭೆಯು ಕುಲಪತಿಗಳಾದ ಪ್ರೊ.ಜಿ.ಹೇಮಂತಕುಮಾರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಜರುಗಿತು.
ಮೈಸೂರು ವಿವಿ ಬೋಧಕ ವೃಂದದ ಬ್ಯಾಕ್‍ಲಾಗ್, ಹೈದರಾಬಾದ್ ಕರ್ನಾಟಕ ಮತ್ತು ಪ್ರಸ್ತುತ ಖಾಲಿ ಇರುವ ಹುದ್ದೆಗಳನ್ನು ಸೇರಿದಂತೆ 76 ಹುದ್ದೆಗಳನ್ನು  ನೇರ ನೇಮಕಾತಿ ಮಾಡಲು ಶಿಕ್ಷಣ ಮಂಡಳಿಯ ಸದಸ್ಯರೆಲ್ಲರು ಅನುಮೋದನೆ ಸೂಚಿಸಿದರು.
ಈ ಸಂದರ್ಭದಲ್ಲಿ ಕುಲಪತಿಗಳಾದ ಪ್ರೊ.ಜಿ.ಹೇಮಂತಕುಮಾರ್ ಅವರು ಮಾತನಾಡಿ, ಬೋಧಕ ವೃಂದದ ಬ್ಯಾಕ್‍ಲಾಗ್ ಸಿಂಡಿಕೇಟ್ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಈ ಹುದ್ದೆಗಳ ಭರ್ತಿಗೆ 1:10 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಕರೆಯುವಂತೆ ಸಲಹೆ ನೀಡಿರುವುದರಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದರು.
ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಮೈಸೂರು ವಿವಿ ವತಿಯಿಂದ ಕಳೆದ ಸಾಲಿನಲ್ಲಿ MA in tribal development ಎಂಬ ನೂತನ ಕೋರ್ಸ್ ಪ್ರಾರಂಭಿಸಲಾಗಿತ್ತು. ಈ ವಿಭಾಗಕ್ಕೆ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಲು ಬರಲಿಲ್ಲದ ಕಾರಣ ಮೈಸೂರು ವಿವಿ ವ್ಯಾಪ್ತಿಯ ಚಾಮರಾಜನಗರದ ಕಾಲೇಜಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದು ಅಧ್ಯಯನ ಮಾಡಬಹುದು ಎಂದರು.
ಸರ್ಕಾರದ ನೇಮಕಾತಿಗಳಲ್ಲಿ 2016ರ ನಂತರ ಎಂ.ಫಿಲ್ ಕೋರ್ಸ್‍ಗಳನ್ನು ಪರಿಗಣಿಸದ ಕಾರಣ ಬೇಡಿಕೆ ಇಲ್ಲದೆ ಕೋರ್ಸ್‍ಅನ್ನು ಸ್ಥಗಿತಗೊಳಿಸಲಾಗಿತ್ತು. ಪ್ರಸ್ತುತ ಎಂ.ಫಿಲ್ ನಿಯಮಾವಳಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಕೋರ್ಸ್ ಮುಂದುವರಿಸಲು ಸರ್ಕಾರದ ಅನುಮೋದನೆಗಾಗಿ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.
ಎನ್‍ಸಿಸಿ ಹಾಗೂ ಎನ್‍ಎಸ್‍ಎಸ್ ಶಿಬಿರಾರ್ಥಿಗಳಿಗೆ ಪರೀಕ್ಷಾ ಸಂದರ್ಭದಲ್ಲಿ ಅಂತರಾಜ್ಯ, ಅಂತರಾಷ್ಟ್ರೀಯ ಕ್ರೀಡೆ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳು ನಿಗಧಿಯಾಗಿರುತ್ತವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗುವ ಸನ್ನಿವೇಶ ಎದರಾಗುತ್ತದೆ. ಆದ್ದರಿಂದ ಅಂತಹ ವಿದ್ಯಾರ್ಥಿಗಳನ್ನು ಮರುಪರೀಕ್ಷೆಗೆ ಹಾಜರಾಗುವಂತೆ ಅವಕಾಶ ಕಲ್ಪಿಸಿಕೊಡಲು ನಿರ್ಣಯಿಸಲಾಗಿದೆ ಎಂದು ತಿಳಿಸಿದರು.
ಮೈಸೂರು ವಿವಿ ವ್ಯಾಪ್ತಿಗೆ ಒಳಪಡುವ 9 ಕಾಲೇಜುಗಳ ಸ್ವಾಯತ್ತತೆ ಮುಂದುವರಿಯಲಿದ್ದು, ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಬಿ.ಎನ್.ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು, ಸರಸ್ವತಿಪುರಂ ಜೆಎಸ್‍ಎಸ್ ಮಹಿಳಾ ಕಾಲೇಜು, ಎಸ್.ಬಿ.ಆರ್.ಆರ್ ಮಹಾಜನ ಕಾಲೇಜು, ಸೇಂಟ್ ಫಿಲೋಮಿನ ಕಾಲೇಜು, ಮಂಡ್ಯ ಸರ್ಕಾರಿ ಮಹಾವಿದ್ಯಾಲಯ ಕಾಲೇಜು, ಮಂಡ್ಯ ಮಹಿಳಾ ಸರ್ಕಾರಿ ಕಾಲೇಜು, ಹಾಸನ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು, ಹಾಸನದ ಸರ್ಕಾರಿ ವಿಜ್ಞಾನ ಕಾಲೇಜು ಕಾಲೇಜುಗಳಿಗೆ ಸ್ವಾಯತ್ತತೆಯನ್ನು ಮುಂದುವರಿಸಲಾಗುವುದು ಎಂದರು.
ಪ್ರಸಕ್ತ ಸಾಲಿನಿಂದ ಮೈಸೂರು ವಿವಿ ಸಂಯೋಜಿತ ಮಂಡ್ಯ ಜಿಲ್ಲೆಯ ಭಾರತೀನಗರದ ಭಾರತೀ ಕಾಲೇಜು ಹೊಸದಾಗಿ ಸ್ವಾಯತ್ತತಾ ಸ್ಥಾನಮಾನ ಬಯಸಿದ್ದು, ಯುಜಿಸಿ ಇಂದ ಅನುಮೋದನೆ ಬರಬೇಕಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕುಲಪತಿಗಳು ಮಂಡಿಸಿದ ವಿಷಯಗಳಿಗೆ ನೆರೆದಿದ್ದ ಸದಸ್ಯರೆಲ್ಲರು ಅನುಮೋದನೆ ಸೂಚಿಸಿದರು.
ಕುಲಸಚಿವರಾದ ಆರ್.ಶಿವಪ್ಪ, ಪರೀಕ್ಷಾಂಗ ಕುಲಸಚಿವರಾದ ಪ್ರೊ.ಕೆ.ಎಂ.ಮಹದೇವನ್, ಹಣಕಾಸು ಅಧಿಕಾರಿ ಪ್ರೊ.ಟಿ.ಎಸ್.ದೇವರಾಜು, ಶಿಕ್ಷಣ ಮಂಡಳಿಯ ಸದಸ್ಯರಾದ ವಾಣಿಜ್ಯ ನಿಕಾಯದ ಡೀನ್ ಪ್ರೊ.ಡಿ.ಆನಂದ್, ಶಿಕ್ಷಣ ನಿಕಾಯದ ಡಾ.ಎಸ್.ಮದಿಅಲಗನ್, ಕಾನೂನು ನಿಕಾಯ ಡೀನ್ ಪ್ರೊ.ರಮೇಶ್, ವಿಜ್ಞಾನ ನಿಕಾಯ ಡೀನ್ ಪ್ರೊ.ಜಿ.ವೆಂಕಟೇಶ್ ಕುಮಾರ್, ಕಲಾ ನಿಕಾಯ ಡೀನ್ ಪ್ರೊ.ಎನ್.ಎಂ.ತಳವಾರ ಇತರರು ಉಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss