ಹೊಸದಿಗಂತ ವರದಿ,ಮೈಸೂರು:
ಮೈಸೂರು ವಿಶ್ವವಿದ್ಯಾಲಯವು ಉನ್ನತ ಭಾರತ ಅಭಿಯಾನ ಯೋಜನೆಯಡಿ ಗ್ರಾಮಗಳ ಅಭಿವೃದ್ಧಿ ಉದ್ದೇಶದಿಂದ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ 6 ಗ್ರಾಪಂ ಗಳಿಂದ 6 ಗ್ರಾಮಗಳು ಹಾಗೂ 10 ಶಾಲೆಗಳನ್ನು ದತ್ತು ಪಡೆದುಕೊಳ್ಳಲಾಗಿದೆ ಎಂದು ಮೈಸೂರು ವಿವಿಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.
ಸೋಮವಾರ ವಿವಿಯ ಆಡಳಿತ ಕ್ರಾಫರ್ಡ್ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಪಂನಿoದ ‘ಸೇಬಿನ ಕೋಟೆ’, ಪಿ.ಜಿ.ಪಾಳ್ಯ ಗ್ರಾಪಂದಿoದ ‘ಹುಯಿಲ್ನತ್ತ’, ಎಂ.ಎo.ಹಿಲ್ಸ್ ಗ್ರಾಪಂನಿoದ ‘ಒಡಕೆಹಳ್ಳ’, ಪೊನ್ನಾಚಿ ಗ್ರಾಪಂನಿoದ ‘ರಾಮೇಗೌಡನ ಹಳ್ಳಿ’, ಮಿಣ್ಯಂ ಗ್ರಾಪಂ ನಿಂದ ‘ಸೂಳೆಕೋಬೆ’, ಹುತ್ತೂರು ಗ್ರಾಪಂ ನಿಂದ ‘ಗುಳ್ಳದ ಬಯಲು’ ಗ್ರಾಮ ಸೇರಿದಂತೆ ಒಟ್ಟು 6 ಗ್ರಾಮವನ್ನು ದತ್ತು ಪಡೆಯಲಾಗಿದೆ ಎಂದು ತಿಳಿಸಿದರು.
ಮೈಸೂರು ವಿವಿಯು ಶತಮಾನೋತ್ಸವ ಆಚರಿಸಿಕೊಂಡಿದ್ದು, ವಿವಿ ವ್ಯಾಪ್ತಿಯಲ್ಲಿ ನೂರು ವರ್ಷಗಳ ಇತಿಹಾಸವನ್ನು ಹೊಂದಿರುವ, ಹಲವು ಸಾಧನೆಗಳನ್ನು ಮಾಡಿರುವಂತಹ ಶಾಲೆಗಳನ್ನು ಗುರುತಿಸಿ, ಅವುಗಳನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಹಾಗೂ ಗುಣಮಟ್ಟದ ಶಿಕ್ಷಣ ಹೆಚ್ಚಿಸುವ ಮೂಲಕ ಮಾದರಿ ಶಾಲೆಗಳನ್ನಾಗಿಸುವ ಉದ್ದೇಶದಿಂದ ಶಾಲೆಗಳನ್ನು ದತ್ತು ಸ್ವೀಕರಿಸಲಾಗಿದೆ ಎಂದು ಹೇಳಿದರು.
ವಿವಿ ದತ್ತು ಪಡೆದ 10ಶಾಲೆಗಳಿವು: ಚಾಮರಾಜನಗರ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಕೊಳ್ಳೇಗಾಲ ತಾಲ್ಲೂಕಿನ ಕುಣಗಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಶತಮಾನ ಕಂಡ ಶಾಲೆ), ಯಳಂದೂರು ತಾಲ್ಲೂಕಿನ ಕೊಮಾರನಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಶತಮಾನ ಕಂಡ ಶಾಲೆ), ಹನೂರು ತಾಲ್ಲೂಕಿನ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ತೂಬಿನ ಕೆರೆಯ ಸರ್.ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದ ಪಾಂಡವಪುರ ತಾಲ್ಲೂಕಿನಲಕ್ಷ್ಮೀಸಾಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಂಡ್ಯ ತಾಲ್ಲೂಕಿನ ಎಲೆಚಾಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಾಸನ ಹೇಮಗಂತೋತ್ರಿ ಸ್ನಾತಕೋತ್ತರ ಕೇಂದ್ರದ ಹೊಳೆನರಸೀಪುರ ತಾಲ್ಲೂಕಿನ ಯಲ್ಲೇಶಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೈಸೂರು ವಿಶ್ವವಿದ್ಯಾನಿಲಯದ ಮೈಸೂರು ತಾಲ್ಲೂಕಿನ ಮಾರ್ಬಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಂಗ್ರಾಲ್ ಛತ್ರದ ಸರ್ಕಾರಿ ಪ್ರೌಢಶಾಲೆ, ಕೆ.ಆರ್.ಮಿಲ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಚ್.ಡಿ.ಕೋಟೆ ತಾಲ್ಲೂಕಿನ ಕ್ಯಾತನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದುಕೊಳ್ಳಲಾಗಿದೆ.
ವಿಶ್ವವಿದ್ಯಾನಿಲಯವು ದತ್ತು ಪಡೆದಿರುವ ಶಾಲೆಗಳನ್ನು ಅಭಿವೃದ್ಧಿಪಡಿಸುವ ಹಾಗೂ ಅವುಗಳ ಜೀರ್ಣೋದ್ಧಾರಕ್ಕಾಗಿ ಒಂದು ಸಮಿತಿಯನ್ನು ರಚಿಸಿದ್ದು, ಅದರಂತೆ ಸಮಿತಿಯು ಅಧ್ಯಕ್ಷರನ್ನೊಳಗೊಂಡ ಎಲ್ಲಾ ಸದಸ್ಯರಗಳು ಶಾಲೆಗಳಿಗೆ ಖುದ್ದು ಭೇಟಿ ನೀಡಿ, ಶಾಲೆಗಳಲ್ಲಿರುವಂತಹ ನ್ಯೂನತೆಗಳನ್ನು ಗುರುತಿಸಿದೆ. ಈ ಸಂಬoಧ ಮುಖ್ಯಮಂತ್ರಿಗಳ ಶಿಕ್ಷಣ ಸುಧಾರಣಾ ಸಲಹಗಾರರಾದ ಡಾ.ಎಂ.ಆರ್.ದೊರೆಸ್ವಾಮಿ ಇವರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ದತ್ತು ಪಡೆದಿರುವ ಶಾಲೆಗಳ ಬಗ್ಗೆ ಚರ್ಚಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಪ್ರಸಾರಾಂಗ ನಿರ್ದೇಶಕ ಪ್ರೊ.ಎನ್.ಎಂ.ತಳವಾರ, ಪ್ರಾಚ್ಯವಿದ್ಯಾ ಸಂಶೋಧನಾಲಯ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ ಉಪಸ್ಥಿತರಿದ್ದರು.