ಮೈಸೂರು: ಎಲ್ಲರ ಸಂಘಟಿತ ಶ್ರಮದಿಂದಾಗಿ ಮೈಸೂರಿಗೆ ತ್ಯಾಜ್ಯ ಮುಕ್ತ ನಗರಿಯ ಪಟ್ಟ ಲಭಿಸಲು ಕಾರಣವಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರು ಸ್ವಚ್ಛನಗರಿ ಎಂಬುದು ಪದೇಪದೆ ಸಾಬೀತಾಗುತ್ತಲೇ ಇದೆ. ಈಗ ಮತ್ತೊಮ್ಮೆ ಕೇಂದ್ರದ ಪಟ್ಟಿ ಬಿಡುಗಡೆಯಾಗಿದ್ದು, ಅದರನ್ವಯ ತ್ಯಾಜ್ಯಮುಕ್ತ ನಗರಗಳ ಪಟ್ಟಿಯಲ್ಲಿ ೬ ನಗರಗಳ ಪೈಕಿ ನಮ್ಮ ಮೈಸೂರು ನಗರ ಸಹ ಇರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.
ದೇಶದ ೬ ನಗರಗಳು ತ್ಯಾಜ್ಯ ಮುಕ್ತ ಎಂದು ಕೇಂದ್ರ ಸರ್ಕಾರ ಪಟ್ಟಿ ಬಿಡುಗಡೆ ಮಾಡಿದ್ದು, ಮೈಸೂರು, ಅಂಬಿಕಾಪುರ್, ರಾಜಕೋಟ್, ಸೂರತ್, ಇಂದೋರ್ ಹಾಗೂ ನವೀ ಮುಂಬೈ ಈ ಪಟ್ಟಿಯಲ್ಲಿವೆ. ದೇಶದ ೬ ನಗರಗಳ ಪಟ್ಟಿಯಲ್ಲಿ ಸ್ಥಾನಪಡೆಯುವುದು ಎಂದರೆ ಕಡಿಮೆ ಮಾತಲ್ಲ. ಇದು ರಾಜ್ಯಕ್ಕೂ ಹೆಮ್ಮೆಯ ವಿಷಯವಾಗಿದೆ. ಮೈಸೂರು ರಾಜ್ಯದ ಎಲ್ಲ ನಗರಗಳಿಗೂ ಮಾದರಿಯಾಗಿದೆ. ಮೈಸೂರಿಗೆ ತ್ಯಾಜ್ಯಮುಕ್ತ ನಗರಿ ಎಂಬ ಗರಿ ಮೂಡಲು ಸಂಘಟಿತ ಶ್ರಮ ಇರುವುದು ಎದ್ದುಕಾಣುತ್ತದೆ. ಮೈಸೂರಿನ ಮಹಾಜನತೆ, ಸಂಸದರು, ಶಾಸಕರು, ಜನಪ್ರತಿನಿಧಿಗಳು, ಪಾಲಿಕೆ ಸದಸ್ಯರು ಹಾಗೂ ಸಂಘಸAಸ್ಥೆಗಳಿಗೆ ಅಭಿನಂದನೆ ಸಲ್ಲಿಸುವೆ.
ಅಲ್ಲದೆ, ಮುಂದೆಯೂ ಸಹ ಮೈಸೂರು ಜಿಲ್ಲೆಯನ್ನು ಮುಖ್ಯಮಂತ್ರಿಗಳು ಮತ್ತು ನಗರಾಭಿವೃದ್ಧಿ ಸಚಿವರ ಸಹಕಾರದಿಂದ ಅಭಿವೃದ್ಧಿಯ ಪಥದಲ್ಲಿ ಮುನ್ನೆಡೆಸುವ ನಂಬಿಕೆ ನನಗಿದೆ.ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಮೈಸೂರಿಗೆ ಇನ್ನಷ್ಟು ಹೆಸರು ಬರುವಂತೆ ಮಾಡುವೆ ಎಂದು ತಿಳಿಸಿದ್ದಾರೆ.