ಮೈಸೂರು: ಮಹಾಮಾರಿ ಕೊರೋನಾ ರುದ್ರ ತಾಂಡವ ವಾಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡಶಕ್ತಿ ದೇವತೆ ಚಾಮುಂಡೇಶ್ವರಿಯ ವರ್ಧಂತೋತ್ಸವ ಸರಳವಾಗಿ, ಸಾಂಪ್ರದಾಯಿಕವಾಗಿ ಸೋಮವಾರ ನಡೆಯಿತು ಆಷಾಢ ಮಾಸದ ಕೃಷ್ಣ ಪಕ್ಷ, ರೇವತಿ ನಕ್ಷತ್ರದಲ್ಲಿ ನಾಡ ಅಧಿದೇವತೆಯ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಮುಂಜಾನೆ ತಾಯಿ ಚಾಮುಂಡೇಶ್ವರಿಗೆ ಅಭ್ಯಂಜನ ಸ್ನಾನ ಮಾಡಿಸಿದ ಬಳಿಕ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಸೇರಿದಂತೆ ವಿವಿಧ ಅಭಿಷೇಕ ನಡೆಸಿ, ವಿಶೇಷ ಪೂಜೆ ಯನ್ನು ಸಲ್ಲಿಸಲಾಯಿತು. ಬಳಿಕ ಚಾಮುಂಡೇಶ್ವರಿಗೆ ವಿಶೇಷ ಅಲಂಕಾರ ಮಾಡಿ, ಮಹಾಮಂಗಳಾರತಿ ಮಾಡಲಾಯಿತು. ಅಲಂಕೃತ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯ ಮೆರವಣಿಗೆ ಯನ್ನು ದೇವಸ್ಥಾನದ ಆವರಣದೊಳಗೆ ಅರ್ಚಕರು ವೇದ, ಮಂತ್ರ ಘೋಷಣೆ ಯೊಂದಿಗೆ ಮಾಡಿದರು. ಮೈಸೂರಿನ ರಾಜವಂಶ ಸ್ಥ ಯದುವೀರ್ ದಂಪತಿ ಭಾಗವಹಿಸಿ, ತಮ್ಮ ಕುಲದೇವತೆಯ ದರ್ಶನ ಪಡೆದು ಪ್ರಾರ್ಥಿಸಿದರು. ಲಕ್ಷಾಂತರ ಮಂದಿ ಭಕ್ತರ ನಡುವೆ ಸಡಗರ, ಸಂಭ್ರಮದಿಂದ ನಡೆಯುತ್ತಿದ್ದ ಚಾಮುಂಡೇಶ್ವರಿಯ ವರ್ಧಂತೋತ್ಸವ, ನೂರು ವರ್ಷದ ಬಳಿಕ ಭಕ್ತರಿಲ್ಲದೆ ಸರಳವಾಗಿ ನಡೆಯಿತು.
ಕೊರೋನಾ ಕಾರಣದಿಂದ ಚಿನ್ನದ ಪಲ್ಲಕ್ಕಿ ಉತ್ಸವವನ್ನು ರದ್ದುಗೊಳಿಸಲಾಯಿತು. ಅಲ್ಲದೇ ಪ್ರಸಾದ ತಯಾರಿಕೆ ಹಾಗೂ ವಿತರಣೆಗೆ ನಿರ್ಬಂಧ ಹೇರಲಾಗಿತ್ತು. ಚಾಮುಂಡೇಶ್ವರಿ ಹುಟ್ಟು ಹಬ್ಬ ಆಚರಿಸುವ, ಆಚರಣೆಯಲ್ಲಿ ಭಾಗವಹಿಸುವ ಅವಕಾಶ ಈ ಬಾರಿ ಭಕ್ತರಿಗೆ ತಪ್ಪಿತು. ಶಕ್ತಿ ದೇವತೆಯ ನೆಲೆವೀಡಿನಲ್ಲೇ ಆಕೆಯ ಹುಟ್ಟು ಹಬ್ಬದ ಸಂಭ್ರಮವನ್ನು ಕೊರೋನಾ ಮಹಾಮಾರಿ ಕಳೆಗುಂದಿಸಿತು